ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬುಧವಾರದಂದು ಧಾರಾಕಾರವಾಗಿ ಸುರಿದ ಮಳೆ ಆವಾಂತರವನ್ನೇ ಸೃಷ್ಟಿಸಿದೆ. ಸಂಜೆಯಿಂದ ಸುರಿದ ಮಳೆಯಿಂದ ಅಥಣಿ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಗೆ ಮಳೆಯ ನೀರು ನುಗ್ಗಿದೆ.
ರಸ್ತೆಯ ಪಕ್ಕದ ಚರಂಡಿಗಳು ಬ್ಲಾಕ್ ಆದ ಪರಿಣಾಮ ಆಸ್ಪತ್ರೆಗೆ ನೀರು ನುಗ್ಗಿದ್ದು, ಎರಡು ಅಡಿಗಿಂತ ಹೆಚ್ಚು ನೀರು ಸಂಗ್ರಹವಾಗಿತ್ತು. ಮಳೆಯ ನೀರನ್ನು ಹೊರ ಹಾಕಲು ಆಸ್ಪತ್ರೆ ಸಿಬ್ಬಂದಿ ಮತ್ತು ಪೌರಕಾರ್ಮಿಕರು ಹರಸಾಹಸ ಪಡಬೇಕಾಯಿತು. ಸತತ ಮೂರು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ಸೃಷ್ಟಿಸಿದ ಆವಾಂತರದಿಂದ ಕೆಲಕಾಲ ಜನಜಿವನ ಅಸ್ತವ್ಯಸ್ತವಾಗಿತ್ತು.
ಆಸ್ಪತ್ರೆ ಮುಂಭಾಗದ ಚರಂಡಿ ಸರಿ ಪಡಿಸಿ ನೀರು ಹೊರಹಾಕಲಾಗಿದೆ. ಕೆಳಮಹಡಿಯಲ್ಲಿ ಹೊರರೋಗಿಗಳ ವಿಭಾಗವಿದ್ದ ಕಾರಣ ರೋಗಿಗಳಿಗೆ ಯಾವುದೇ ತೊಂದರೆ ಆಗಿಲ್ಲ.