ಮಡಿಕೇರಿ: ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಯಲ್ಲಿ ಪ್ರತಿ ಮಳೆಗಾಲ ಬಂದ್ರೆ ಸಾಕು ಜಿಲ್ಲೆಯ ಜನರಲ್ಲಿ ಅದೇನೋ ಆತಂಕ ಮನೆಮಾಡಿಬಿಡುತ್ತೆ. ಅದರಲ್ಲೂ ಇದೀಗ ಜಿಲ್ಲಾಡಳಿತ ನೀಡಿರೋ ಆ ಸ್ಥಳಗಳಲ್ಲಿ ಮತ್ತೆ ಪ್ರವಾಹ, ಭೂಕುಸಿತ ಉಂಟಾಗುವ ಆತಂಕ ಎದುರಾಗಿದೆ. ಅದಕ್ಕಾಗಿ ಜಿಲ್ಲಾಡಳಿತ ಸೂಕ್ಷ್ಮ ಪ್ರದೇಶಗಳೆಂದು ಗುರುತು ಮಾಡಿರುವ ಸ್ಥಳದಿಂದ ಜನರನ್ನ ಸುರಕ್ಷಿತ ಸ್ಥಳ ಮತ್ತು ಕಾಳಜಿ ಕೇಂದ್ರಗಳಿಗೆ ಕಳುಹಿಸಲು ತಯಾರಿ ನಡೆಸಿದೆ.
ಹೀಗಾಗಿ ಮುಂಬರುವ ಮಳೆಗಾಲದಲ್ಲಿ ಗುಡ್ಡಗಾಡು ಜನರಿಗೆ ಮತ್ತೆ 2018-19ರ ಆ ಕರಾಳ ದಿನಗಳ ಜೊತೆಗೆ ಮಳೆಯ ಆತಂಕವೂ ಎದುರಾಗಿದೆ.
ಕೊಡಗು ಜಿಲ್ಲೆಯಲ್ಲಿ ಸದ್ಯ 45 ಕಡೆ ಸಂಭವನೀಯ ಭೂಕುಸಿತ ಹಾಗೂ 44 ಕಡೆಯಲ್ಲಿ ಸಂಭವನೀಯ ಜಲಪ್ರವಾಹದ ಸ್ಥಳಗಳನ್ನು ಜಿಲ್ಲಾಡಳಿತ ಗುರುತುಮಾಡಿದೆ. ಹೀಗಾಗಿ, ಕೊಡಗಿನ ಜನತೆ ಆತಂಕದಲ್ಲಿಯೇ ಜೀವನ ಕಳೆಯುವಂತಾಗಿದೆ.
ಜಿಲ್ಲೆಯ 5 ತಾಲೂಕುಗಳ 10 ಹೋಬಳಿಯ 100 ಕಡೆಯಲ್ಲಿ ಜಲಕಂಟಕ ಎದುರಾಗುವ ಸೂಚನೆ ನೀಡಿದೆ. 2018-19ರಲ್ಲಿ ಭೀಕರ ಜಲ ಪ್ರವಾಹ ಉಂಟಾಗಿ ಬೆಟ್ಟ, ರಸ್ತೆಗಳು ಕುಸಿದು ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡ ಜನ ನಿರಾಶ್ರಿತರ ಕೇಂದ್ರದಲ್ಲಿ ವಾಸಮಾಡಿದ್ದರು. ಆ ಭೀತಿ ಜನರಲ್ಲಿ ಮಾಸುವ ಮುನ್ನವೇ ಜಿಲ್ಲಾಡಳಿತ ಮತ್ತೆ ಪ್ರಕೃತಿ ವಿಕೋಪದ ಮುನ್ಸೂಚನೆ ನೀಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ.
ಪೂರ್ವ ಮುಂಗಾರಿನಲ್ಲಿಯೇ ಹೆಚ್ಚು ಮಳೆ ಸುರಿಯುತ್ತಿದ್ದು, ಒಂದು ರೀತಿಯ ಭಯ ಸೃಷ್ಟಿಯಾಗಿದೆ. ಇನ್ನು ಕೆಲವು ದಿನಗಳಲ್ಲಿ ಮುಂಗಾರು ಜಿಲ್ಲೆಗೆ ಪ್ರವೇಶಿಸಲಿದ್ದು, ಜಿಲ್ಲೆಗೆ ಅಪಾಯ ತಂದೊಡ್ಡುತ್ತಾ ಎನ್ನುವ ಭೀತಿಯಲ್ಲಿದ್ದಾರೆ. ಮಳೆಗಾಲದಲ್ಲಿ ಸಂಭವಿಸುವ ಪ್ರಕೃತಿ ವಿಕೋಪ ನಿಭಾಯಿಸಲು ಈಗಾಗಲೇ ಕೊಡಗು ಜಿಲ್ಲಾಡಳಿತ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳ ಪಟ್ಟಿ ಮಾಡಿಕೊಂಡು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಇನ್ನೂ 2018 ರಿಂದ ನಿರಂತರವಾಗಿ ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ. ಭೂಕುಸಿತ ಪ್ರವಾಹ ಜಲಸ್ಫೋಟ. ಸರಣಿ ಭೂಕಂಪಗಳು ಕಳೆದ ವರ್ಷದವರೆಗೂ ಅಲ್ಲಲ್ಲಿ ಭೂಕುಸಿತ ರಸ್ತೆ ಬಿರುಕು ಭೂ ಕುಸಿತ ಉಂಟಾಗುವ ಸ್ಥಳಗಳಲ್ಲಿ ವಾಸ ಮಾಡುವ ಜನರಿಗೆ ನೋಟಿಸ್ ಕೊಟ್ಟಿರುವುದನ್ನು ಗಮನಿಸಿದೇವೆ. ಈ ಬಾರಿಯೂ ಅದೇ ಆತಂಕ ಎದುರಾಗಿದೆ.