ಕಲಬುರಗಿ/ಚಿಕ್ಕೋಡಿ: ಉತ್ತರ ಕರ್ನಾಟಕ ಭಾಗದಲ್ಲಿ ವರುಣನ ಆರ್ಭಟ ಇನ್ನೂ ನಿಲ್ಲುತ್ತಿಲ್ಲ. ಭಾರೀ ಮಳೆಯಿಂದಾಗಿ ಹಲವು ಅನಾಹುತಗಳು ಸೃಷ್ಟಿಯಾಗಿದ್ದು, ಕಲಬುರಗಿಯಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಚಿಕ್ಕೋಡಿಯಲ್ಲಿ ಪ್ರವಾಹಕ್ಕೆ ಹಾನುವಾರುಗಳು ಕೊಚ್ಚಿ ಹೋಗಿವೆ.
ಕಲಬುರಗಿಯ ಬಳವಡಗಿ ಗ್ರಾಮದ ರಾಜ್ ಅಹ್ಮದ್ (65) ಹಾಗೂ ಜಬ್ಬಾರ್ (32) ಸಿಡಿಲಿಗೆ ಬಲಿಯಾದವರು. ಮಂಗಳವಾರ ಮಧ್ಯಾಹ್ನ 3ಗಂಟೆಗೆ ಏಕಾಏಕಿ ಮೋಡಗಳ ಘರ್ಜನೆ ಶುರುವಾಗಿ ಸಿಡಿಲು ಅಪ್ಪಳಿಸಿದೆ. ಗ್ರಾಮದ ವಿಶ್ವನಾಥ ರೆಡ್ಡಿ ಮಾಲಿ ಪಾಟೀಲ್ ಅವರ ಹೊಲದಲ್ಲಿ ಕೂಲಿಯಾಳುಗಳಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಸಿಡಿಲಬ್ಬರದ ಮಳೆಯ ಆರ್ಭಟಕ್ಕೆ ಹೆದರಿ ರಾಜ್ ಅಹ್ಮದ್ ಮತ್ತು ಜಬ್ಬಾರ್ ಸಮೀಪದ ಮರದ ಆಸರೆ ಪಡೆದಿದ್ದಾರೆ.
ಈ ವೇಳೆ ದೊಡ್ಡ ಸದ್ದಿನ ಮೂಲಕ ಧರೆಗಪ್ಪಳಿಸಿದ ಸಿಡಿಲಿನ ಹೊಡೆತಕ್ಕೆ ಇಬ್ಬರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಮೃತರ ಶವಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಚ್ಚಿ ಹೋದ ಜಾನುವಾರುಗಳು
ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ 35ಕ್ಕೂ ಹೆಚ್ಚು ಜಾನುವಾರುಗಳು ಹಳ್ಳದಲ್ಲಿ ಉಂಟಾದ ಪ್ರವಾಹಕ್ಕೆ ಕೊಚ್ಚಿ ಹೋಗಿರುವ ಘಟನೆ ಮಹಾರಾಷ್ಟ್ರದ ಯವತಮಾಳ ಜಿಲ್ಲೆಯ ಮಹಾಗಾಂವ ತಾಲೂಕಿನ ಬಲದೇರಿ ಗ್ರಾಮದಲ್ಲಿ ನಡೆದಿದೆ.
ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಯಿಂದ ಪ್ರವಾಹ ಉಂಟಾಗಿ ಜಾನುವಾರುಗಳು ಕೊಚ್ಚಿ ಹೋಗುವ ವೀಡಿಯೋ ಈಗ ವೈರಲ್ ಆಗಿದೆ. ರೈತರು ಜಾನುವಾರುಗಳನ್ನು ಮೇಯಿಸಲು ಹೋದ ಸಂದರ್ಭದಲ್ಲಿ ಏಕಾಏಕಿ ಪ್ರವಾಹ ಉಂಟಾಗಿ ಜಾನುವಾರುಗಳು ಕೊಚ್ಚಿ ಹೋಗಿವೆ. ಪ್ರವಾಹದ ರಭಸಕ್ಕೆ ಕೊಚ್ಚಿ ಹೋದ 35 ಜಾನುವಾರುಗಳ ಪೈಕಿ 20ಕ್ಕೂ ಹೆಚ್ಚು ಜಾನುವಾರುಗಳನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಕೊಚ್ಚಿ ಹೋಗಿರುವ 15ಕ್ಕೂ ಹೆಚ್ಚು ರಾಸುಗಳಿಗೆ ಶೋಧ ಕಾರ್ಯ ಭರದಿಂದ ಸಾಗಿದೆ.