-ಫ್ಲೈಓವರ್ ಮೇಲೆ 2 ಅಡಿಯಷ್ಟು ನೀರು
-ಬಿಸಿಲಿಗೆ ಬೆಂದಿದ್ದ ಜನರ ಮೊಗದಲ್ಲಿ ಹರ್ಷ
ಬೆಂಗಳೂರು: ಸೋಮವಾರ ಸಿಲಿಕಾನ್ ಸಿಟಿ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಹೀಗಾಗಿ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರಿನಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ತ್ಯಾಗರಾಜನಗರದ ವಿದ್ಯಾಪೀಠ ಸರ್ಕಲ್ ಬಳಿ ಇರುವ ಅಪಾರ್ಟ್ ಮೆಂಟ್ ಮತ್ತು ಶ್ರೀ ಸಾಯಿ ಸನ್ನಿಧಿ ಅಪಾರ್ಟ್ ಮೆಂಟ್ ಸೆಲ್ಲರ್ ಗೆ ನೀರು ನುಗ್ಗಿತ್ತು. ಅಷ್ಟೇ ಅಲ್ಲದೆ ಮಳೆ ನೀರು ನುಗ್ಗಿದ ಪರಿಣಾಮ 5 ಅಡಿ ಎತ್ತರದ ಕಾಂಪೌಂಡ್ ಕುಸಿದು ಬಿದ್ದಿದೆ. ಭಾರೀ ಮಳೆಗೆ ಹೆಬ್ಬಾಳ ಫ್ಲೈ ಓವರ್ ಕೆರೆಯಂತಾಗಿದ್ದು, ಫ್ಲೈ ಓವರ್ ಮೇಲೆ 2 ಅಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.
Advertisement
Advertisement
ಫ್ಲೈ ಓವರ್ ಮೇಲೆ ನೀರು ನಿಂತ ಹಿನ್ನೆಲೆಯಲ್ಲಿ ಏರ್‍ಪೋರ್ಟ್ ರೋಡ್ ಜಾಮ್ ಆಗಿದ್ದು, ಟ್ರಾಫಿಕ್ ಸಮಸ್ಯೆಯನ್ನ ಬಗೆಹರಿಸಲು ಪೊಲೀಸರ ಹರಸಾಹಸ ಪಡುವಂತಾಗಿತ್ತು. ನಂತರ ಹೆಬ್ಬಾಳ ಟ್ರಾಫಿಕ್ ಇನ್ಸ್ ಪೆಕ್ಟರ್ ಫ್ಲೈ ಓವರ್ ಮೇಲೆ ನಿಂತಿದ್ದ ನೀರನ್ನು ಹರಿದು ಹೋಗುವಂತೆ ಮಾಡಿದ್ದರು. ಬೇಸಿಲ ಬೇಗೆಗೆ ಸುಡುತ್ತಿದ್ದ ಕರಾವಳಿ ಜಿಲ್ಲೆ ಉಡುಪಿ ಕೊಂಚ ತಂಪಾಗಿದೆ. ಉಡುಪಿಯಲ್ಲಿ ಗುಡುಗು ಸಹಿತ ಮಳೆ ಬಿದ್ದಿದೆ.
Advertisement
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಕಳೆದ ರಾತ್ರಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಬಿರುಗಾಳಿ ಮಳೆಗೆ ಚಿಕ್ಕಬಳ್ಳಾಪುರ ನಗರದ ಗ್ರಂಥಾಲಯದ ಬಳಿ ಇದ್ದ ಬೃಹದಾಕಾರದ ಜಾಹೀರಾತು ನಾಮಫಲಕ ಧರೆಗುರುಳಿದ್ದು ಚಲಿಸುತ್ತಿದ್ದ ಕಾರೊಂದು ಹಾನಿಗೊಳಗಾಗಿದೆ. ಚಿಂತಾಮಣಿ ತಾಲೂಕಿನಾದ್ಯಾಂತ ಸಹ ಉತ್ತಮ ಮಳೆಯಾಗಿದ್ದು, ಕೆರೆ-ಕುಂಟೆ ಕಲ್ಯಾಣಿಗಳಿಗೆ ನೀರು ಹರಿದುಬಂದಿದೆ. ಮತ್ತೊಂದೆಡೆ ಭಾರೀ ಬಿರುಗಾಳಿ ಮಳೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗುಂಜೂರು ಬಳಿಯ ಟೋಲ್ ಬೂತ್ ಹಾನಿಯಾಗಿದೆ. ಟೋಲ್ ಬೂತ್‍ನ ಮೇಲ್ಛಾವಣಿಯ ಶೀಟುಗಳು ಕಿತ್ತು ಹೋಗಿವೆ. ದೊಡ್ಡಬಳ್ಳಾಪುರ ನಗರದ ಸಂಜಯನಗರದಲ್ಲೂ ಸಹ ಹಲವು ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಗಿತ್ತು.
Advertisement
ಇತ್ತ ಬರದ ನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ವರುಣ ಸಿಂಚನವಾಗಿದೆ. ಮುದ್ದೇಬಿಹಾಳ ತಾಲೂಕಿನ ಸುತ್ತ ಮುತ್ತ ಗುಡುಗು ಸಹಿತ ಭಾರಿ ಮಳೆ ಸುರಿದಿದೆ. ವಿಜಯಪುರ ತಾಲೂಕಿನ ಮದಬಾವಿ ತಾಂಡಾ 1ರಲ್ಲಿ ಭಾರೀ ಗಾಳಿ ಸಮೇತ ಮಳೆ ಆಗಿದ್ದು, ಬಿರುಗಾಳಿಗೆ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ಬಿರುಗಾಳಿಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ ಆಗಿದ್ದು, ಮನೆಯಲ್ಲಿನ ವಸ್ತುಗಳು, ಟಿವಿ ಪ್ರಿಡ್ಜ್ ಹಾನಿಗೊಳಗಾಗಿವೆ. ಆದರೆ ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನಾದ್ಯಂತ ಸಿಡಿಲು, ಗುಡುಗು ಹಾಗೂ ಬಿರುಗಾಳಿ ಸಹಿತ ಮಳೆಯಾಗಿ ಭಾರೀ ಅವಾಂತರ ಸೃಷ್ಟಿಸಿದೆ. ಈವರೆಗೆ ಮಳೆ ಇಲ್ಲದೆ ಖಾಲಿ ಖಾಲಿಯಾಗಿದ್ದ ಚೆಕ್ ಡ್ಯಾಂಗಳು ರಾತ್ರಿ ಸುರಿದ ಮಳೆಯಿಂದ ಭರ್ತಿಯಾಗಿರುವ ಖುಷಿ ಒಂದೆಡೆಯಾದರೆ, ಬಿರುಗಾಳಿಗೆ ಸಿಲುಕಿರುವ ಐಮಂಗಲ, ಹರಿಯಬ್ಬೆ ಹಾಗೂ ಮೇಟಿಕುರ್ಕೆ ಗ್ರಾಮಸ್ಥರ ಮನೆಗಳ ಮೇಲ್ಛಾವಣಿಯ ಶೀಟು, ಹೆಂಚುಗಳು ಹಾರಿ ಹೋಗಿ ಬಾರಿ ಆತಂಕ ಸೃಷ್ಟಿಸಿವೆ. ಅಲ್ಲದೇ ಧರ್ಮಪುರದಲ್ಲಿ ಬೃಹತ್ ಮರವೊಂದು ಧರೆಗುರಳಿದ್ದು, ಆ ಮರವು ಆಟೋ ಮೇಲೆ ಬಿದ್ದ ಪರಿಣಾಮ ಆಟೋ ಸಂಪೂರ್ಣ ಜಖಂ ಆಗಿದೆ. ಹೀಗಾಗಿ ಮಳೆ ಅನ್ನೋದು ಮರೀಚಿಕೆಯಾಗಿದ್ದ ಕೋಟೆನಾಡಲ್ಲಿ ರಾತ್ರಿ ಸುರಿದ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿ ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
ಕುಷ್ಟಗಿ ಸೇರಿದಂತೆ ಕೊಪ್ಪಳ ಜಿಲ್ಲೆಯ ವಿವಿಧೆಡೆ ರಾತ್ರಿ ಮಳೆಯಾಗಿದೆ. ಬಿರುಗಾಳಿ, ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆ ಉತ್ತಮವಾಗಿ ಸುರಿದಿದೆ. ಮಳೆಗಾಲ ಪ್ರಾರಂಭವಾದರೂ ಜಿಲ್ಲೆಯಲ್ಲಿ ಮಳೆಯಾಗಿರಲಿಲ್ಲ. ಇದರಿಂದಾಗಿ ಜನರು ಮಳೆ ಯಾವಾಗ ಬರುತ್ತದೆ ಎಂದು ಮುಗಿಲು ನೋಡುತ್ತಾ ಕುಳಿತಿದ್ದರು. ಇದೀಗ ರೋಹಿಣಿ ಮಳೆ ಸ್ಪರ್ಶ ಜಿಲ್ಲೆಯಲ್ಲಾಗಿರೋದು ನೆಮ್ಮದಿ ಮೂಡಿಸಿದೆ. ರಾತ್ರಿ ಕುಷ್ಟಗಿ ಪಟ್ಟಣದಲ್ಲಿ ಉತ್ತಮ ಮಳೆಯಾಗಿದ್ದು, ಕುಷ್ಟಗಿ ಪಟ್ಟಣದ ಮಾರುತಿ ಸರ್ಕಲ್ ನಲ್ಲಿ ಚರಂಡಿ ನೀರು ರಸ್ತೆ ಹಾಗೂ ಅಂಗಡಿಗಳಿಗೆ ನುಗ್ಗಿತ್ತು. ಇದರಿಂದಾಗಿ ಅಂಗಡಿಯವರು ನೀರು ಹೊರಹಾಕಲು ಹರಸಾಹಸ ಮಾಡಬೇಕಾಯಿತು.