ಚಿಕ್ಕೋಡಿ/ಬೆಳಗಾವಿ: ನೆರೆಯ ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಯ ಉಪನದಿಗಳಾದ ವೇದಗಂಗಾ ಹಾಗೂ ದೂಧಗಂಗಾ ಪಂಚಗಂಗಾ ನದಿಗಳು ತುಂಬಿ ಹರಿಯುತ್ತಿದ್ದು, ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದೆ.
ನದಿಗಳು ತುಂಬಿ ಹರಿಯುತ್ತಿರುವ ಕಾರಣ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ದೂಧಗಂಗಾನದಿ ದಡದಲ್ಲಿರುವ ಯಕ್ಸಂಬಾ ಪಟ್ಟಣದ ಹೊರ ಪೀರಸಾಬ ದರ್ಗಾ ಹಾಗೂ ಪಂಚ ಗಂಗಾನದಿ ತಟದಲ್ಲಿರುವ ಮಹಾರಾಷ್ಟ್ರದ ಕೊಲ್ಲಾಪೂರ ಜಿಲ್ಲೆಯ ಶಿರೋಳ ತಾಲೂಕಿನ ಸುಪ್ರಸಿದ್ಧ ನರಸಿಂಹವಾಡಿಯ ದತ್ತ ದೇವಸ್ಥಾನ ಜಲಾವೃತಗೊಂಡಿವೆ.
Advertisement
Advertisement
ಮಹಾರಾಷ್ಟ್ರ ರಾಜ್ಯದ ಕೃಷ್ಣಾ ನದಿಯ ಉಪ ನದಿಗಳ 40ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಈಗಾಗಲೇ ಚಿಕ್ಕೋಡಿ ತಾಲೂಕಿನ 6 ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ_ ಯಡೂರ, ದೂಧಗಂಗಾ ನದಿಯ ಕಾರದಗಾ_ ಭೋಜ, ವೇದಗಂಗಾ ನದಿಯ ಭೊಜವಾಡಿ_ ಕುಣ್ಣೂರ, ವೇದಗಂಗಾ ನದಿಯ ಸಿದ್ನಾಳ – ಅಕ್ಕೋಳ, ವೇದಗಂಗಾ ನದಿಯ ಜತರಾಟ- ಭೀವಶಿ ಹಾಗೂ ದುಧಗಂಗಾ ನದಿಯ _ ಮಲಿಕವಾಡ_ ದತ್ತವಾಡ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆಗಳು ಮುಳುಗಡೆಯಾಗಿವೆ.
Advertisement
Advertisement
ಸೇತುವೆ ಮುಳುಗಡೆ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುತ್ತಿದ್ದು ಸುತ್ತುವರೆದು ಪರ್ಯಾಯ ಮಾರ್ಗಗಳಿಂದ ಪ್ರಯಾಣ ಬೆಳೆಸುತ್ತಿದ್ದಾರೆ. ಇನ್ನೂ ಕೃಷ್ಣಾ ನದಿಗೆ ಕೇವಲ ಮಳೆ ನೀರಿನಿಂದ 50 ಸಾವಿರ ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿರುವ ಕಾರಣ ನದಿಯಲ್ಲಿ ಇಳಿಯದಂತೆ ಚಿಕ್ಕೋಡಿ ತಾಲೂಕಾಡಳಿತ ಜನರಲ್ಲಿ ವಿನಂತಿಸಿದೆ.