ಬೆಂಗಳೂರು: ರಾಜ್ಯದಲ್ಲಿ ಅಬ್ಬರಿಸುತ್ತಿದ್ದ ವರುಣದೇವ ಈಗ ಕೊಂಚ ಶಾಂತವಾಗಿದ್ದಾನೆ. ಮುಂಗಾರು ಪೂರ್ವ ಮಳೆಯಿಂದಾಗಿ ರಾಜ್ಯದಲ್ಲಿ ಅಪಾಯ ಹಾನಿ ಸಂಭವಿಸಿದೆ.
ಈವರೆಗೆ 7,010 ಹೆಕ್ಟೇರ್ ಕೃಷಿ ಬೆಳೆ ನಾಶವಾಗಿದ್ರೆ, 5,736 ಹೆಕ್ಟೇರ್ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. 4,242 ಮನೆಗಳಿಗೆ ಭಾಗಶಃ ಹಾನಿಯಾಗಿದ್ರೆ, 430 ಜಾನುವಾರು ಹಾಗೂ 12 ಜನರ ಸಾವಾಗಿದೆ. ಕೊಪ್ಪಳದ ತುಂಗಭದ್ರಾ ಜಲಾಶಯ 65 ವರ್ಷಗಳ ಇತಿಹಾಸದಲ್ಲಿ ಮೇ ತಿಂಗಳಲ್ಲಿ 28 ಟಿಎಂಸಿ ನೀರು ಸಂಗ್ರಹವಾಗಿದೆ.
ನಿನ್ನೆ ಒಂದೇ ದಿನ 8 ಟಿಎಂಸಿ ಹರಿದು ಬಂದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 7 ಟಿಎಂಸಿ ನೀರು ಸಂಗ್ರಹವಾಗಿತ್ತು. ಸದ್ಯ ಡ್ಯಾಂಗೆ 90 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರಿನ ಒಳಹರಿವಿದೆ. 255 ಕ್ಯೂಸೆಕ್ ನೀರು ಹೊರಗೆ ಬಿಡಲಾಗ್ತಿದೆ. ಕೊಡಗು ಜಿಲ್ಲೆಯಾದ್ಯಂತ ಮಳೆ ಬಿರುಸು ಪಡೆದಿದೆ. ಅಬ್ಬಿ ಜಲಪಾತ ಮೈದುಂಬಿದ್ದು ಪ್ರವಾಸಿಗರನ್ನು ಆಕರ್ಷಿಸ್ತಿದೆ. ಇದನ್ನೂ ಓದಿ: ವಾರಣಾಸಿ ಜಿಲ್ಲಾ ಕೋರ್ಟ್‍ನಲ್ಲಿ ಕಾಶಿ ಮಸೀದಿ ವಿಚಾರಣೆ – ಜ್ಞಾನವಾಪಿ ಮಸೀದಿಯಲ್ಲಿ ಮತ್ತೊಂದು ಶಿವಲಿಂಗ?
ಚಿಕ್ಕಬಳ್ಳಾಪುರದ ಶ್ರೀನಿವಾಸ ಸಾಗರ ಜಲಾಶಯದ ಗೋಡೆ ಹತ್ತಿದ್ದ ಯುವಕ ನೋಡ ನೊಡುತ್ತಿದ್ದಂತೆಯೇ ಹಾರಿ ಕೆಳಗೆ ಬಿದ್ದಿದ್ದಾನೆ. ಈ ಭಯಾನಕ ದೃಶ್ಯ ಅಲ್ಲಿದ್ದವರ ಮೊಬೈಲ್‍ನಲ್ಲಿ ಸೆರೆಯಾಗಿದೆ. ಆತ ಗೌರಿಬಿದನೂರು ಮೂಲದವನಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅತ್ತ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮಿತಿ ಮೀರಿದ್ದು, 25 ಮಂದಿ ಸಾವನ್ನಪ್ಪಿದ್ದಾರೆ. ಬಾರ್ಪಿಟಾ, ಬಿಸ್ವಾನಾಥ್, ಕಚಾರ್, ದರಾಂಗ್, ಗುಲಾಘಾಟ್ ಸೇರಿ 22 ಜಿಲ್ಲೆಗಳ ಏಳೂವರೆ ಲಕ್ಷಕ್ಕಿಂತ ಹೆಚ್ಚು ಜನ ಸಂಕಷ್ಟ ಎದುರಿಸ್ತಿದ್ದಾರೆ. 26 ಸಾವಿರದ 236 ಮಂದಿಯನ್ನು ಸೇನೆ ನೆರವಿನೊಂದಿಗೆ ಎಸ್‍ಡಿಆರ್‍ಎಫ್ ರಕ್ಷಿಸಿದೆ. ಸೇನೆ ಪ್ರವಾಹ ಪೀಡಿತರಿಂದ ಹೆಲಿಕಾಪ್ಟರ್ ಮೂಲಕ ಊಟವನ್ನ ವಿತರಿಸುತ್ತಿದೆ. 91 ಸಾವಿರದ 518 ಮಂದಿಗೆ 269 ಗಂಜಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ದೆಹಲಿಯಲ್ಲೂ ವರ್ಷಧಾರೆ ಆಗ್ತಿದ್ದು, ವಿಮಾನ ಸಂಚಾರದಲ್ಲಿ ವ್ಯತ್ಯಯ ಆಗಿದೆ.