ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ತೋಟಗಳು ಜಲಾವೃತವಾಗಿ ನದಿಗಳು ಮೈ ದುಂಬಿ ಹರಿಯುತ್ತಿವೆ.
ಮೂಡಿಗೆರೆ ತಾಲೂಕಿನಾದ್ಯಂತ ಗುರುವಾರದಿಂದ ಸುರಿಯುತ್ತಿರುವ ವರುಣನ ಅಬ್ಬರಕ್ಕೆ ಹೊಲ-ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡಿವೆ. ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿ, ಹೊರಟ್ಟಿ, ಕೊಟ್ಟಿಗೆಹಾರ, ಜಾಣಿಗೆ, ಗೋಣಿಬೀಡು ಸೇರಿದಂತೆ ಸುತ್ತಮುತ್ತ ಭಾರೀ ಮಳೆಯಾಗುತ್ತಿದೆ.
ಜಾಣಿಗೆ ಗ್ರಾಮದ ಹೇಮಾವತಿ ಸೇರುವ ಹುಕ್ಕೇರಿ ಹಳ್ಳದ ನೀರು ಅಕ್ಕಪಕ್ಕದ ತೋಟಗಳಿಗೆ ನುಗ್ಗಿದ್ದು, ತೋಟಗಳ ಮಧ್ಯೆ ಅಡಿ ಎತ್ತರದಲ್ಲಿ ನೀರು ನಿಂತಿದೆ. ಮೂಲರಹಳ್ಳಿಯಲ್ಲಿ ಭಾರೀ ಮಳೆಯಿಂದ ಗ್ರಾಮೀಣ ಭಾಗದ ರಸ್ತೆ ಕೂಡ ಕುಸಿದಿದೆ. ಪಶ್ಚಿಮಘಟ್ಟಗಳ ಸಾಲಲ್ಲೂ ಮೃಗಶೀರ ಮಳೆ ಅಬ್ಬರಕ್ಕೆ ಜೀವ ನದಿಗಳಾದ ತುಂಗಾ, ಭದ್ರಾ, ಹೇಮಾವತಿ ನದಿಗಳು ಕೂಡ ತಮ್ಮ ವೇಗವನ್ನ ಹೆಚ್ಚಿಸಿಕೊಂಡಿವೆ. ಎನ್.ಆರ್.ಪುರ, ಶೃಂಗೇರಿ, ಕೊಪ್ಪ ಸೇರಿದಂತೆ ದಟ್ಟ ಕಾನನದ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಮಲೆನಾಡಿಗರು ಸಂತಸದಿಂದಿದ್ದಾರೆ.
ಇತ್ತ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಮಳೆ ಮುಂದುವರಿದಿದ್ದು, ಬ್ರಹ್ಮಗಿರಿ ಬೆಟ್ಟದ ಶ್ರೇಣಿಯಲ್ಲಿ ಉತ್ತಮ ಮಳೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾವೇರಿ ಕನ್ನಿಕೆ ಸುಜೋತಿ ಮೈದುಂಬಿ ಹರಿಯುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಭಾಗಮಂಡಲ ತ್ರಿವೇಣಿ ಸಂಗಮದಲ್ಲೂ ನೀರಿನ ಮಟ್ಟ ಏರುತ್ತಿದೆ. ಒಂದು ವೇಳೆ ಮಳೆ ಇದೇ ರೀತಿ ಮುಂದುವರಿದಲ್ಲಿ ಎರಡು ದಿನದಲ್ಲಿ ಸಂಗಮ ಭರ್ತಿಯಾಗುವ ಸಾಧ್ಯತೆ ಇದೆ.