ಬೆಂಗಳೂರು: ಮುಂದಿನ ನಾಲ್ಕೈದು ದಿನಗಳ ಕಾಲ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಅವರು, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಕರಾವಳಿಯಲ್ಲಿ ಮೇ 25, 26 ಹಾಗೂ 27ರಂದು ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಭಾರೀ ಬಿಸಿಗಾಳಿ ಬೀಸುವ ನಿರೀಕ್ಷೆಯಿದೆ. ಇಂದು ರಾತ್ರಿ ಮಳೆ ಆಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಇದುವರೆಗೂ 20 ಮಿಲಿ ಮೀಟರ್ ಮಳೆಯಾಗಿದ್ದು, ರಾತ್ರಿವರೆಗೂ 40 ಮಿಲಿಮೀಟರ್ ಮಳೆಯಾಗುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆ ಇಂದು ಬೆಂಗಳೂರಿನಲ್ಲಿ ಮಳೆಯ ಸಿಂಚನವಾಗಿದೆ. ವಿಧಾನಸೌಧ, ಕಾರ್ಪೋರೇಷನ್, ಶಾಂತಿನಗರ ಸೇರಿದಂತೆ ಹಲವಡೆ ಭಾರೀ ಮಳೆಯಾಗಿದೆ.
ರೇಷ್ಮೆ ನಗರಿ ರಾಮನಗರ ಜಿಲ್ಲೆಯಾದ್ಯಂತ ಸಂಜೆ ಭಾರೀ ಮಳೆಯಾಗಿದೆ. ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಆರಂಭದಲ್ಲಿ ಜೋರು ಮಳೆಯ ಜೊತೆಗೆ ಆಲಿಕಲ್ಲು ಸಹ ಬಿದ್ದವು. ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಭರ್ಜರಿ ಮಳೆಯಾಗಿದ್ದರೆ, ಕನಕಪುರ ಮಾಗಡಿಯಲ್ಲಿ ಸಾಧಾರಣ ಮಳೆಯಾಗಿದೆ. ಅರುಣನ ಆರ್ಭಟಕ್ಕೆ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಮಳೆಯ ನೀರು ರಸ್ತೆಯಲ್ಲಿ ನಿಂತು ವಾಹನ ಸವಾರರು ಪರದಾಡುವಂತಾಗಿತ್ತು.