ರಾಯಚೂರು: ಕರ್ನಾಟಕವನ್ನು ಮತ್ತೊಮ್ಮೆ ಹಿಂಡಿಹಿಪ್ಪೆ ಮಾಡಿದ್ದ ಮಳೆಯಬ್ಬರ ಸದ್ಯಕ್ಕೆ ತಣ್ಣಗಾಗಿದೆ. ಆದರೆ ಕೃಷ್ಣಾ ನದಿಗೆ 3 ಲಕ್ಷ 69 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
ಕರಾವಳಿಯ ಮೂರು ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಇವತ್ತು ಆರೆಂಜ್, ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಆದರೆ ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಲ್ಲಿ ಆರೆಂಜ್ ಬದಲು ಕಡಿಮೆ ಮಳೆ ನಿರೀಕ್ಷೆಯ ಯಲ್ಲೋ ಅಲರ್ಟ್ ಜಾರಿಯಲ್ಲಿದೆ. ಇತ್ತ ಮಹಾರಾಷ್ಟ್ರದಲ್ಲೂ ಮಳೆ ತಗ್ಗಿದ್ದು, ಅಲ್ಲಿಂದ ಕೃಷ್ಣಾ ನದಿಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ತಗ್ಗಿದೆ.
ಕೃಷ್ಣಾ ನದಿಗೆ ನಾರಾಯಣಪುರ ಜಲಾಶಯದಿಂದ 3 ಲಕ್ಷ 69 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ನದಿಯ ಪಾತ್ರದ ಜನರಿಗೆ ಪ್ರವಾಹ ಭೀತಿ ಶುರುವಾಗಿದೆ. ರಾಯಚೂರು ತಾಲೂಕಿನ ಗುರ್ಜಾಪುರ ಗ್ರಾಮ ಬಳಿ ಕೃಷ್ಣಾ ನದಿಗೆ ಭೀಮಾನದಿ ಸಂಗಮವಾಗಲಿದ್ದು, ಭೀಮಾನದಿ ಅಪಾಯಮಟ್ಟದಲ್ಲಿ ಹರಿದುಬರುತ್ತಿದೆ. ಕೃಷ್ಣ ನದಿಯ ಪ್ರವಾಹದಿಂದ ಶೀಲಹಳ್ಳಿ, ಹೂವಿನ ಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ದೇವದುರ್ಗ ಮತ್ತು ಕಲಬುರಗಿ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದೆ.
ತುಂಗಭದ್ರಾ ನದಿಗೆ 1 ಲಕ್ಷ 22 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದು, ನದಿ ಪಾತ್ರದ ಜನರಲ್ಲಿ ಇನ್ನೂ ಆತಂಕ ಮೂಡಿಸಿದೆ. ಇದರಿಂದ ಅವಶ್ಯಕತೆ ಬಿದ್ದರೆ ರಕ್ಷಣಾ ಕಾರ್ಯಕ್ಕಾಗಿ ರಾಯಚೂರಿಗೆ ಸೇನಾ ಪಡೆಯನ್ನು ಕರೆಯಿಸಿಕೊಳ್ಳಲಾಗಿದೆ. ಒಬ್ಬರು ಕರ್ನಲ್, ಇಬ್ಬರು ಮೇಜರ್ ಹಾಗೂ ಮೂರು ಜನ ಜೆಸಿಒ ಮತ್ತು 37 ಜನ ಜವಾನರ ತಂಡ ಜಿಲ್ಲೆಗೆ ಬಂದಿದ್ದು, ಇವತ್ತು ಪ್ರವಾಹ ಪೀಡಿತ ಪ್ರದೇಶಗಳನ್ನು ವೀಕ್ಷಣೆ ಮಾಡಲಿದ್ದಾರೆ.