ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ವರುಣನ ಅರ್ಭಟ ಮುಂದುವರೆದಿದ್ದು ನಾಳೆ ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನದ ಒಳಗಡೆ ಮತ ಚಲಾಯಿಸಿದರೆ ಉತ್ತಮ ಎನ್ನುವ ಮಾತು ಕೇಳಿ ಬಂದಿದೆ.
ರಾಜ್ಯಾದ್ಯಂತ ಹಲವೆಡೆ ಗುರುವಾರ ಸಂಜೆಯಿಂದ ಮಳೆಯಾಗಿತ್ತು. ಇಂದು ಸಹ ರಾಜ್ಯದ ಹಲವೆಡೆ ಮಳೆ ಮುಂದುವರೆದಿದೆ. ನಾಳೆಯೂ ಸಹ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು ಮಧ್ಯಾಹ್ನದ ಬಳಿಕ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಇನ್ನು ಎರಡು ದಿನಗಳ ಕಾಲ ಮಳೆ ಮುಂದುವರೆಯುವ ಸಾಧ್ಯತೆಯಿದೆ. ಲಕ್ಷದ್ವೀಪ ಮತ್ತು ತಮಿಳುನಾಡು ಭಾಗದಲ್ಲಿ ಮೇಲ್ಮೈ ಸುಳಿಗಾಳಿ ನಿರ್ಮಾಣ ಹಾಗೂ ಉತ್ತರ ಕರ್ನಾಟಕದಿಂದ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ಟ್ರಫ್ (ಮೋಡಗಳ ಸಾಲು) ನಿರ್ಮಾಣ ವಾಗಿರುವ ಹಿನ್ನಲೆಯಲ್ಲಿ ಮಳೆಯಾಗುತ್ತಿದೆ. ಇನ್ನೂ ಬೆಂಗಳೂರು ನಗರ ಸೇರಿ ದಕ್ಷಿಣ ಒಳನಾಡಿನ ಭಾಗ ಮತ್ತು ಉತ್ತರ ಕರ್ನಾಟಕದಲ್ಲಿ ಕೂಡ ಮಳೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.
Advertisement
ಸಂಜೆ ವೇಳೆಗೆ ನಗರದ ಮೆಜೆಸ್ಟಿಕ್, ಆನಂದರಾವ್ ಸರ್ಕಲ್, ಗಾಂಧಿನಗರ, ಮಲ್ಲೇಶ್ವರಂ, ಕಾರ್ಪೋರೇಷನ್ ಸರ್ಕಲ್, ಶಾಂತಿನಗರ, ಯಶವಂತಪುರ, ರಾಜಾಜಿನಗರ, ವಿಜಯನಗರ ಸೇರಿದಂತೆ ಹಲವು ಭಾಗಗಳಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಿದೆ. ಮೈಸೂರು ರಸ್ತೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ತವರಿಗೆ ತೆರಳಲು ಆಗಮಿಸಿದ್ದ ಹಲವು ಪ್ರಯಾಣಿಕರು ಪರದಾಟ ನಡೆಸಿದರು. ಆಕಾಲಿಕ ಮಳೆಯಿಂದ ನಗರದ ಹಲವೆಡೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಾಜ್ಯದ ಸಾರಿಗೆ ಇಲಾಖೆಯ ಹಲವು ಬಸ್‍ಗಳನ್ನು ಚುನಾವಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರಿಂದ ಬಸ್‍ಗಳ ಕೊರತೆಯೂ ಉಂಟಾಗಿತ್ತು.