ಯಾದಗಿರಿ/ಮಡಿಕೇರಿ: ಶುಕ್ರವಾರ ಜಿಲ್ಲೆಯ ಹಲವೆಡೆ ಸುಮಾರು ಒಂದು ತಾಸಿಗೂ ಅಧಿಕ ಸಮಯ ಮಳೆಯಾಗಿದ್ದು, ಪರಿಣಾಮ ಸಿಡಿಲು ಬಡಿದು ಇಬ್ಬರು ಕುರಿಗಾಯಿಗಳು ಮೃತಪಟ್ಟಿರುವ ಘಟನೆ ನಡೆದಿದೆ.
ನಗನೂರ ಗ್ರಾಮದ ಮಲ್ಲಪ್ಪ (50) ಮತ್ತು ಕುಮಾರ್ (14) ಮೃತ ತಾತ ಮೊಮ್ಮಗ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಬೆಟ್ಟದಲ್ಲಿ ದುರ್ಘಟನೆ ನಡೆದಿದೆ. ತಾತ ಮೊಮ್ಮಗ ಇಬ್ಬರೂ ಮಳೆ ಬರುತ್ತಿರುವಾಗ ರಕ್ಷಣೆಗೆಂದು ಬೆಟ್ಟದ ಕಲ್ಲುಗಳ ಮಧ್ಯೆ ಕುಳಿತಿದ್ದರು. ಈ ವೇಳೆ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಯಾದಗಿರಿ ಶಹಪುರ ತಾಲೂಕಿನಲ್ಲಿ ಭಾರೀ ಮಳೆಯಾಗಿದ್ದು, ಶಹಪುರ ನಗರದ ರಸ್ತೆಗಳೆಲ್ಲಾ ಜಲಾವೃತವಾಗಿದ್ದವು. ಇದರಿಂದ ರಸ್ತೆ ಸಂಚಾರವೂ ಅಸ್ತವ್ಯಸ್ತವಾಗಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗಳಲ್ಲಿ ಮಳೆ ನೀರು ನಿಂತಿತ್ತು.
ಕೊಡಗಿನಲ್ಲಿಯೂ ಮಳೆ ಚುರುಕಾಗಿದ್ದು, ಕಳೆದ ದಿನ ಹಲವೆಡೆ ಜಿಟಿ-ಜಿಟಿ ಮಳೆಯಾಗಿದೆ. ಕೆಲವು ದಿನಗಳಿಂದ ಬಿಡುವು ಕೊಟ್ಟಿದ್ದ ವರುಣ ಮತ್ತೆ ಬಿರುಸು ಪಡೆದುಕೊಂಡಿದೆ. ಅಲ್ಲದೆ ಜಿಲ್ಲೆಯಾದ್ಯಂತ ಮೋಡ ಕವಿದ ಹಾಗೂ ಚಳಿಯಿಂದ ಕೂಡಿದ ವಾತಾವರಣ ಇದೆ. ಈಗಾಗಲೇ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಅಪಾರ ಪ್ರಮಾಣದ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿದೆ. ಇತ್ತೀಚೆಗೆ ವರುಣ ಸ್ವಲ್ಪ ಬಿಡುವು ಕೊಟ್ಟಿದ್ದು, ಮತ್ತೆ ಮಳೆ ಆದರೆ ಗತಿಯೇನು ಎನ್ನುವ ಆತಂಕದಲ್ಲೇ ಸ್ಥಳೀಯರು ಇದ್ದಾರೆ.