ಬೆಂಗಳೂರು: ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ರಾಜ್ಯದ ಹಲವೆಡೆಗಳಲ್ಲಿ ಇಂದು ಸಂಜೆ ವರುಣ ತಂಪೆರೆದಿದ್ದಾನೆ. ಗುಡುಗು ಸಹಿತ ಭಾರೀ ಮಳೆಯಾಗಿದ್ದರಿಂದ ವಾಹನ ಸವಾರರು ಪರದಾಡಿದರೆ, ಇತ್ತ ಮಳೆ ಬಂದಿದ್ದರಿಂದ ರೈತರು ಖುಷಿಯಾಗಿದ್ದಾರೆ.
ಎಲ್ಲೆಲ್ಲಿ ಮಳೆಯಾಗಿದೆ..?: ಮಂಡ್ಯ, ದಾವಣಗೆರೆ, ರಾಯಚೂರು, ಕೊಪ್ಪಳ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಮೈಸೂರು ಹಾಗೂ ವಿಜಯಪುರದಲ್ಲಿ ಮಳೆಯಾಗಿದೆ.
Advertisement
ಮೈಸೂರಲ್ಲಿ ವರ್ಷದ ಮೊದಲ ಮಳೆಯಾಗಿದ್ದು, ಜನ ಸಂತಸಗೊಂಡಿದ್ದಾರೆ. ಇನ್ನು ಸಂಜೆ ಮಂಡ್ಯ ಜಿಲ್ಲೆಯ ಹಲವೆಡೆ ಅರ್ಧ ಗಂಟೆಗಳ ಕಾಲ ಬಿರುಗಾಳಿ ಸಹಿತ ಮಳೆ (Karnatak Rain) ಸುರಿದಿದೆ. ಬಿಸಿಲ ಬೇಗೆಯಿಂದ ತತ್ತರಗೊಂಡಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ವರ್ಷದ ಮೊದಲ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಬಿರುಗಾಳಿ ಸಹಿತ ಭಾರೀ ಮಳೆಗೆ ಆದಿಚುಂಚನಗಿರಿ ಕಮಾನು ಧರೆಗೆ ಉರುಳಿದೆ. ಕಮಾನು ರಸ್ತೆಗೆ ಬಿದ್ದ ಕಾರಣ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ.
Advertisement
Advertisement
ಗಣಂಗೂರು ಟೋಲ್ ಸಮೀಪ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ಇದರಿಂದ ಕಂಬದಲ್ಲಿದ್ದ ಹೈಟೆನ್ಷನ್ ವೈರ್ ರಸ್ತೆಗೆ ಬಿದ್ದಿದೆ. ಈ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದೆ. ಇನ್ನು ಕಳ್ಳರ ಕೈ ಚಳಕದಿಂದ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದಾರೆ. ಕಂಬದಲ್ಲಿದ್ದ ರಾಡ್‍ಗಳನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. ಇದರಿಂದ ಕಂಬಗಳು ಸಡಿಲಗೊಂಡು ಧರೆಗೆ ಉರುಳಿದೆ.
Advertisement
ದಾವಣಗೆರೆ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಳೆರಾಯನ ಆಗಮನವಾಗಿದೆ. ಬೆಳಗ್ಗೆಯಿಂದ ಬಿಸಿಲಿನಿಂದ ಕಂಗೆಟ್ಡಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ದಾವಣಗೆರೆ, ಹರಪ್ಪನಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ಜನರಲ್ಲಿ ಸಂತಸ ಮನೆ ಮಾಡಿದೆ. ದಾವಣಗೆರೆ ಭಾರೀ ಗಾಳಿ ಮಳೆಗೆ ಬೃಹತ್ ಕೊಂಬೆಯೊಂದು ಮುರಿದು ಬಿದ್ದಿದೆ. ಮರದ ಕೊಂಬೆ ಬಿದ್ದಿರುವ ಹಿನ್ನೆಲೆ ಮೂರು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಆದರೆ ಮೂರರಿಂದ ನಾಲ್ಕು ಬೈಕ್ ಗಳು ಜಖಂ ಆಗಿವೆ. ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ಮನೆ ಮೇಲ್ಛಾವಣಿ ನೆಲಸಮವಾಗಿವೆ. ಎರಡರಿಂದ ಮೂರು ಮನೆಗಳ ಮೇಲ್ಛಾವಣಿಗಳಿಗೆ ಹಾನಿಯಾಗಿವೆ.
ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿಯೂ ಮಳೆಯಾಗಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಲವೆಡೆ ಜೋರು ಮಳೆಯಾಗಿದೆ. ದಿನೇ ದಿನೇ ಏರುತ್ತಿರುವ ಗರಿಷ್ಠ ತಾಪಮಾನಕ್ಕೆ ಜನ ಹೈರಾಣಾಗಿದೆ. ಒಟ್ಟಿನಲ್ಲಿ ಬಿಸಿಲಿನ ತಾಪಕ್ಕೆ ತತ್ತರಿಸಿದ್ದ ಬಿಸಿಲನಾಡು ಜನರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಇತ್ತ ಕೊಪ್ಪಳ ಜಿಲ್ಲೆಯಲ್ಲಿಯೂ ಅರ್ಧಗಂಟೆ ಭಾರೀ ಗಾಳಿಯೊಂದಿಗೆ ಮಳೆ ಸುರಿದಿದೆ. ಮಳೆಯ ಆಗಮನದಿಂದ ಜನತೆ ಸಂತಸಗೊಂಡಿದ್ದಾರೆ.
ಧಾರವಾಡ: ಜಿಲ್ಲೆಯಾದ್ಯಂತ ಆಲಿಕಲ್ಲು ಮಳೆಯಾಗಿದೆ. ನಗರದಲ್ಲಿ ಮಧ್ಯಾಹ್ನದವರೆಗೆ ಉರಿ ಬಿಸಿಲು, ಮಧ್ಯಾಹ್ನದ ನಂತರ ಸಂಪೂರ್ಣ ಮೋಡ ಕವಿದ ವಾತಾವರಣವಿತ್ತು. ಅಂಜೆಯಾಗ್ತಿದ್ದಂತೆಯೇ ಭಾರೀ ಮಳೆಯಾಗಿದೆ, ರೈತರು ಸಂತಸಗೊಂಡಿದ್ದಾರೆ. ವಿಜಯಪುರದಲ್ಲಿಯೂ ಬಿರುಗಾಳಿ, ಗುಡುಗು ಸಮೇತ ಧಾರಾಕಾರ ಮಳೆಯಾಗಿದೆ.
ಗದಗ: ಜಿಲ್ಲೆಯ ಹಲವೆಡೆ ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಮುಂಗಾರು ಮಳೆ ಆಗಮನದಿಂದ ರೈತರು ಮಂದಹಾಸ ಬೀರಿದ್ದಾರೆ. ಸುಮಾರು ಅರ್ಧ ಗಂಟೆ ಮಳೆ ಸುರಿದಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಸಾರ್ವಜನಿಕರು, ವಾಹನ ಸವಾರರು ಪರದಾಟ ಅನುಭವಿಸಿದರು.
ಹಾವೇರಿ: ಸುಮಾರು 1 ಗಂಟೆಗೂ ಹೆಚ್ಚು ಮಳೆಯಾಗಿದೆ. ಬಿರುಗಾಳಿ ಸಹಿತ ಸುರಿ ಭಾರೀ ಮಳೆಯಿಂದಾಗಿ ಹಾವೇರಿ ಕೊಳ್ಳಿ ಕಾಲೇಜು ಬಳಿ ನಡೆಯುತ್ತಿದ್ದ ಬಿಜೆಪಿ ಮಹಿಳಾ ಸಮಾವೇಶ ಅರ್ಧಕ್ಕೆ ನಿಂತಿದೆ. ಮಹಿಳೆಯಲ್ಲಿ ಪ್ಲಾಸ್ಟಿಕ್ ಕುರ್ಚಿ ಹಿಡಿದು ನೂರಾರು ಮಹಿಳೆಯರು ನಿಂತಿದ್ದರು. ಮಳೆಯಿಂದಾಗಿ ಅಪಾರ ಬಾಳೆ ಬೆಳೆ ನಾಶವಾಗಿದ್ದು, ಕೆಲವೆಡೆ ಮನೆಯ ಮೇಲ್ಚಾವಣಿ ಗಾಳಿಗೆ ಹಾನಿಗೊಂಡಿವೆ. ಇದೀಗ ಬೆಳೆ ನಾಶಕ್ಕೆ ಪರಿಹಾರ ಒದಗಿಸಿಕೊಡುವಂತೆ ರೈತರು ಆಗ್ರಹಿಸಿದ್ದಾರೆ.