ಬೆಂಗಳೂರು: ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿಗೆ ವರುಣ (Rain In Bengaluru) ಇಂದು ಕೂಡ ತಂಪೆರೆದಿದ್ದಾನೆ. ಗುರುವಾರ ರಾತ್ರಿಯಾಗುತ್ತಿದ್ದಂತೆಯೇ ಕೆಲವೆಡೆ ಮಳೆಯಾಗಿತ್ತು.
ಇಂದು ಮಧ್ಯಾಹ್ನದ ವೇಳೆ ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣ ಇತ್ತು. ಇದೀಗ ಬಹುತೇಕ ಭಾಗಗಳಲ್ಲಿ ಮಳೆಯಾಗುತ್ತಿದೆ. ವಿಧಾನಸೌಧ ಸುತ್ತಮುತ್ತಲಿನ ಏರಿಯಾಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಮೆಜೆಸ್ಟಿಕ್, ಕೆ.ಆರ್ ಸರ್ಕಲ್, ಕೆ.ಆರ್ ಮಾರ್ಕೆಟ್, ಟೌನ್ ಹಾಲ್, ರಿಚ್ಮಂಡ್ ಸರ್ಕಲ್, ಎಂಜಿ ರಸ್ತೆ, ಯಶವಂತಪುರ, ಗೋವರ್ಧನ, ಜಾಲಹಳ್ಳಿ ಕ್ರಾಸ್, ನಾಗರಬಾವಿ, ವಿಜಯನಗರ ಸುತ್ತಮುತ್ತ ಮಳೆಯಾಗುತ್ತಿದೆ.
ಸ್ಯಾಂಕಿ ರಸ್ತೆ, ಸದಾಶಿವನaಗರ ಬಳಿ ರಸ್ತೆಗಳು ಕೆರೆಯಂತಾಗಿವೆ. ಮಲ್ಲೇಶ್ವರಂ ಭಾಗದಲ್ಲೂ ಮಳೆ ಜೋರಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಟ ಅನುಭವಿಸಿದ್ದಾರೆ. ಆನೇಕಲ್ ನಲ್ಲಿ ಮೊದಲ ಮಳೆಯೇ ಭರ್ಜರಿಯಾಗಿ ಬರುತ್ತಿದ್ದು, ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನರ ಮುಖದಲ್ಲಿ ಸಂತಸ ಮೂಡಿದೆ. ಅಲ್ಲದೇ ಮಳೆಯಿಂದಾಗಿ ರೈತರ ಮುಖದಲ್ಲಿಯೂ ಮಂದಹಾಸ ಮೂಡಿದೆ. ಇದನ್ನೂ ಓದಿ: ರಾಯಚೂರಿನಲ್ಲಿ ಬಿಸಿಲು ಹೆಚ್ಚಾಗಲು ಕೈ ಅಭ್ಯರ್ಥಿ ಕಾರಣ: ರಾಜಾ ಅಮರೇಶ್ವರ್ ನಾಯಕ್
ಕಳೆದ 24 ಗಂಟೆಯಲ್ಲಿ ಬೆಂಗಳೂರಿನ ವಿದ್ಯಾಪೀಠ ಹಾಗೂ ಬಸವನಗುಡಿಯಲ್ಲಿ 20 ಮಿ.ಮಿ, ಹಂಪಿ ನಗರ ಮತ್ತು ಗಾಳಿ ಆಂಜನೇಯ ದೇಗುಲದ ಕಡೆ 12.5 ಮಿ.ಮಿ ಹಾಗೂ ನಾಗರಬಾವಿ ಮತ್ತು ಮಾರುತಿ ಮಂದಿರದ ಆಸುಪಾಸಿನಲ್ಲಿ 12 ಮಿ.ಮಿ ಮಳೆಯಾಗಿದೆ. ನಿನ್ನೆ ಸುರಿದ 15 ರಿಂದ 20 ನಿಮಿಷ ಮಳೆಯಿಂದ ಮತ್ತೆ ತಾಪಾಮಾನ, ಸೆಖೆ ಹೆಚ್ಚಾಗಿತ್ತು. ತಾಪಮಾನ ಏರಿಕೆ ಮತ್ತು ಸೆಖೆ ಹೆಚ್ಚಾಗುವ ಬಗ್ಗೆ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು.