ಚಾಮರಾಜನಗರ/ಕೋಲಾರ/ಶಿವಮೊಗ್ಗ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಳೆ ಆಗಿದ್ದು, ಈ ಮಳೆಯಿಂದ ಕಾಡ್ಗಿಚ್ಚು ಬೀಳುವ ಆತಂಕ ಕಡಿಮೆಯಾಗಿದೆ.
ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೋಮವಾರ ಸಂಜೆ ಹಾಗೂ ರಾತ್ರಿ ಮಳೆ ಸುರಿದಿದೆ. ಮಳೆಯಿಂದಾಗಿ ಕಾಡ್ಗಿಚ್ಚು ಬೀಳುವ ಸಾಧ್ಯತೆ ಕಡಿಮೆಯಿದ್ದು, ಇದರಿಂದ ಅರಣ್ಯ ಇಲಾಖೆ ನಿಟ್ಟುಸಿರು ಬಿಟ್ಟಿದೆ.
Advertisement
Advertisement
ಕಳೆದ ವರ್ಷ ಇದೇ ಕಾಡಿನಲ್ಲಿ ಕಾಡ್ಗಿಚ್ಚಿನಿಂದ ಸುಮಾರು ಮೂರುವರೆ ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಬೆಂಕಿಗಾಹುತಿ ಆಗಿತ್ತು. ಗಿಡ-ಮರಗಳು ಚಿಗುರೊಡೆಯಲು ಆರಂಭಿಸುವುದರಿಂದ ಬೆಂಕಿ ಬೀಳುವ ಸಾಧ್ಯತೆ ಕಡಿಮೆ ಇದೆ. ಜಿಲ್ಲೆಯ ಹಲವೆಡೆ ತುಂತುರು ಮಳೆಯಾಗಿದ್ದು, ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ತುಂತುರು ಮಳೆಯ ಸಿಂಚನದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತು.
Advertisement
Advertisement
ಸೋಮವಾರ ಕೋಲಾರ ಜಿಲ್ಲೆಯ ಹಲವೆಡೆ ಅಕಾಲಿಕ ತುಂತುರು ಮಳೆ ಆಗಿದ್ದು, ವರ್ಷದ ಮೊದಲ ಮಳೆಗೆ ಜಿಲ್ಲೆಯ ಜನ ಫುಲ್ ಖುಷಿಯಾಗಿದ್ದಾರೆ. ಬಂಗಾರಪೇಟೆ ತಾಲೂಕಿನ ಕೆಲವೆಡೆ, ಕೋಲಾರ ತಾಲೂಕಿನ ಕೆಲವೆಡೆ ತುಂತುರು ಮಳೆ ಆಗಿದೆ. ಇತ್ತ ಶಿವಮೊಗ್ಗದಲ್ಲಿ ಸೋಮವಾರ ಮೋಡ ಕವಿದ ವಾತಾವರಣವಿತ್ತು. ಅಲ್ಲದೆ 15 ನಿಮಿಷಗಳ ಕಾಲ ತುಂತುರು ಮಳೆ ಆಗಿದೆ. ಬಿಸಿಲಿನಿಂದ ಬಸವಳಿದಿದ್ದ ಜನತೆಗೆ ವರುಣ ತಂಪೆರೆದಿದ್ದಾನೆ.