ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಸುರಿದ ಅಕಾಲಿಕ ಮಳೆಗೆ ಲಕ್ಷಾಂತರ ರೂ. ಭತ್ತ ಹಾಗೂ ಕಡಲೆ ಬೆಳೆ ಹಾಳಾಗಿದೆ.
ಜವಳಗೇರಾ ಸೇರಿದಂತೆ ಸುತ್ತಲಿನ ಗ್ರಾಮಗಳ ರೈತರು ಬೆಳೆದಿದ್ದ ಭತ್ತ ಮಳೆಗೆ ಆಹುತಿಯಾಗಿದೆ. ಕಟಾವ್ ಮಾಡಿ ಒಣಗಲು ಬಿಟ್ಟಿದ್ದ ಭತ್ತ ಇನ್ನೇನು ಮಾರುಕಟ್ಟೆಗೆ ಹೋಗಬೇಕಿತ್ತು. ಮಾರುಕಟ್ಟೆಯಲ್ಲಿ ಬೆಲೆ ಉತ್ತಮವಾಗಿರದ ಕಾರಣ ರೈತರು ಭತ್ತವನ್ನು ಕಟಾವ್ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದರು. ಅಕಾಲಿಕವಾಗಿ ದಿಢೀರನೇ ರಾತ್ರಿಯಿಡೀ ಸುರಿದ ಮಳೆ ರೈತನ ಲಾಭದ ನಿರೀಕ್ಷೆಯನ್ನು ಹುಸಿಯಾಗಿಸಿದೆ.
Advertisement
Advertisement
ಮಳೆಯಿಂದ ಹಾಳಾಗಿರುವ ಭತ್ತವನ್ನು ಹೇಗಾದರೂ ಉಳಿಸಿಕೊಳ್ಳಲೇ ಬೇಕಾಗಿರುವ ಸ್ಥಿತಿಯಲ್ಲಿರುವ ರೈತರು, ಒದ್ದೆಯಾಗಿರುವ ಭತ್ತವನ್ನು ಒಣಗಿಸಲು ಪರದಾಡುತ್ತಿದ್ದಾರೆ. ಮೊದಲೇ ಭತ್ತಕ್ಕೆ ನಿರೀಕ್ಷಿತ ಮಟ್ಟದ ಬೆಲೆಯಿಲ್ಲ ಈಗ ಮಳೆಯಿಂದ ಭತ್ತ ಒದ್ದೆಯಾಗಿರುವುದರಿಂದ ಬೆಲೆ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಭತ್ತದ ಜೊತೆ ಕಡಲೆ ಬೆಳೆಯೂ ಅಕಾಲಿಕ ಮಳೆಗೆ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ.