ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ, ರಾಜ್ಯದ ಹಲವೆಡೆ (Rain) ಮಳೆಯಾಗುತ್ತಿದೆ. ಮಳೆಯಿಂದ ಮರ ಮುರಿದುಬಿದ್ದು ಶನಿವಾರ ಬೆಂಗಳೂರಲ್ಲಿ ಪುಟ್ಟ ಬಾಲಕಿ ಬಲಿ ಆಗಿದ್ದಳು. ಇಂದು (ಮಾ.23) ಚಿಕ್ಕಮಗಳೂರಿನಲ್ಲಿ ಸಿಡಿಲಿಗೆ ಒರ್ವ ವೃದ್ಧೆ ಬಲಿ ಆಗಿದ್ದಾರೆ. ಗದ್ದೆಯಲ್ಲಿ ಕೆಲಸ ಮಾಡ್ತಿದ್ದ ಬೇಲೂರಿನ ಹೆಬ್ಬಾಳ ತಿಮ್ಮನಹಳ್ಳಿಯ ನಾಗಮ್ಮ (65) ಸಿಡಿಲಿಗೆ ಬಲಿ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಈ ವರ್ಷದ ಆರಂಭದ ಮಳೆಗೆ ಇಬ್ಬರು ಬಲಿಯಾದಂತಾಗಿದೆ.
ಚಿಕ್ಕಮಗಳೂರು ನಗರ ಸೇರಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಹಾಸನ ಜಿಲ್ಲೆಯಾದ್ಯಂತ ಗುಡುಗು ಸಿಡಿಲು ಸಹಿತ ಜೋರು ಮಳೆ ಆಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಕೊಡಗಿನ ಹಲವೆಡೆ ಮಳೆಯಾಗಿದೆ. ಅತ್ತ, ಬೀದರ್‌ನಲ್ಲಿ ಜೋರು ಮಳೆ ಆಗಿದ್ದು, ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಮಂದಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಕೋಲಾರದ ಶ್ರೀನಿವಾಸಪುರದಲ್ಲಿ ರಾತ್ರಿ ಸುರಿದ ಬಿರುಗಾಳಿ ಸಹಿತ ಜೋರು ಮಳೆಗೆ ಮಾವು ಬೆಳೆಗಾರರಿಗೆ ಭಾರೀ ನಷ್ಟ ತಂದೊಡ್ಡಿದೆ. ಮಾವಿನಕಾಯಿಗಳೆಲ್ಲಾ ನೆಲದ ಪಾಲಾಗಿವೆ.