ಮುಂಬೈ: ಮಹಾರಾಷ್ಟ್ರದಲ್ಲಿ ಭಾರೀ ವರ್ಷಧಾರೆ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ 2500 ಕ್ಯೂಸೆಕ್ ನೀರಿನಿಂದ 3,675 ಕ್ಯೂಸೆಕ್‍ಗೆ ಒಳಹರಿವು ಹೆಚ್ಚಳವಾಗಿದ್ದು, ರೈತರಲ್ಲಿ ಅಲ್ಪ ಪ್ರಮಾಣದ ಸಂತಸವನ್ನುಂಟು ಮಾಡಿದೆ.
ಮಳೆಯೇ ಇಲ್ಲದೆ ಬಿತ್ತನೆಯೂ ತಡವಾಗಿದ್ದರಿಂದ ರೈತರು ತಲೆ ಮೇಲೆ ಕೈ ಹೊತ್ತು ಕುಳಿತಿದ್ದು, ಜೂನ್ ತಿಂಗಳು ಕಳೆದರೂ ವರುಣ ಕೃಪೆ ತೋರಿಲ್ಲ. ಈ ಹಿನ್ನಲೆ ರೈತರು ತೀವ್ರ ಆತಂಕಕ್ಕೊಳಗಾಗಿದ್ದು, ಮಳೆಗಾಗಿ ಪೂಜೆ ಪುನಸ್ಕಾರದ ಮೊರೆ ಹೋಗಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಪ್ರವಾಹವೇ ಉಕ್ಕುವಂತೆ ಮಳೆ ಸುರಿಯುತ್ತಿದ್ದು, ಜಲಾಶಯಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಕಟ್ಟಡದ ಕಾಂಪೌಂಡ್‍ಗಳು ಮಳೆ ನೀರಿಗೆ ಕೊಚ್ಚಿ ಹೋಗುತ್ತಿವೆ.
ಮಹಾರಾಷ್ಟ್ರದಲ್ಲಿ ತೀವ್ರ ಮಳೆಯಾಗುತ್ತಿರುವ ಹಿನ್ನೆಲೆ ರಾಜಾಪೂರ ಬ್ಯಾರೇಜ್ ದುರಸ್ಥಿಗಾಗಿ ನಿರ್ಮಿಸಲಾಗಿದ್ದ ಮಣ್ಣಿನ ತಡೆಗೋಡೆ ಕೊಚ್ಚಿ ಹೋಗಿದೆ. ಇದರಿಂದಾಗಿ 64 ಗೇಟುಗಳ ಮೂಲಕ ನೀರು ಹರಿ ಬಿಡಲಾಗಿದ್ದು, ನೀರು ಹರಿದು ಹಿಪ್ಪರಗಿ ಜಲಾಶಯ ತಲುಪಿದೆ.
ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಇಂದು ಬೆಳಗ್ಗೆ ವಸತಿ ಕಟ್ಟಡದ ಕಾಂಪೌಂಡ್ ಗೋಡೆ ಕುಸಿದು 15 ಜನ ದುರ್ಮರಣಕ್ಕೀಡಾಗಿದ್ದಾರೆ. ಮೃತರೆಲ್ಲರೂ ಕೆಲಸಕ್ಕಾಗಿ ಬಿಹಾರದಿಂದ ಬಂದಿದ್ದವರಾಗಿದ್ದಾರೆ. ಪುಣೆಯ ಕೊಂಧ್ವಾ ಪ್ರದೇಶದಲ್ಲಿ ಸಂಭವಿಸಿದ ದುರಂತದಲ್ಲಿ ಹಲವಾರು ಕಾರುಗಳು ಜಖಂ ಆಗಿವೆ. ಅಪಾರ್ಟ್‍ಮೆಂಟ್ ಪಕ್ಕದಲ್ಲಿರುವ ಕೊಳೆಗೇರಿಗೆ ಗೋಡೆ ಅಪ್ಪಳಿಸಿದ್ದ ಕಾರಣ ಪಾರ್ಕಿಂಗ್ ಲಾಟ್‍ನಲ್ಲಿ ನಿಲ್ಲಿಸಿದ ಕಾರುಗಳು ಅವಶೇಷಗಳಡಿ ಸಿಕ್ಕಿ ಜಖಂಗೊಂಡಿವೆ.