ಕೊಡಗು: ಬೆಂಗಳೂರು ಮಾತ್ರವಲ್ಲ ರಾಜ್ಯದ ವಿವಿಧೆಡೆ ವ್ಯಾಪಕವಾದ ಮಳೆಯಾಗುತ್ತಿದೆ. ಕೊಡಗಿನ ತ್ರಿವೇಣಿ ಸಂಗಮದಲ್ಲಿ ಮಳೆ ಹೆಚ್ಚಾಗಿದ್ದು, ಕಾವೇರಿ (Cauvery River) ಒಡಲಿಗೆ ಜೀವಕಳೆ ಬಂದಿದೆ. ಪರಿಣಾಮ ಕೆಆರ್‌ಎಸ್ (KRS) ಒಳ ಹರಿವು ಹೆಚ್ಚಾಗಿದೆ.
ಕಳೆದೊಂದು ವಾರದಲ್ಲಿ 1 ಟಿಎಂಸಿಯಷ್ಟು ನೀರು ಕನ್ನಂಬಾಡಿ ಕಟ್ಟೆ ಸೇರಿದೆ. ಚಿತ್ರದುರ್ಗದಲ್ಲಿ ಸತತ ಎರಡು ದಿನಗಳ ಮಳೆಗೆ ಮೊಳಕಾಲ್ಮೂರಿನ ಕೆರೆ ಕಟ್ಟೆಗಳು ತುಂಬಿ ಹರಿಯುತ್ತಿವೆ. ಮೇಗಳ ಕಣಿವೆ ಭರ್ತಿಯಾಗಿದೆ. ಹೊಸದುರ್ಗದ ಕೃಷ್ಣಾಪುರ ಕೆರೆ ಕೋಡಿಬಿದ್ದಿದೆ. ಇದನ್ನೂ ಓದಿ: ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬೋಟ್ ಪಲ್ಟಿ – 40 ಜನರ ರಕ್ಷಣೆ
- Advertisement
ಕೆಲ್ಲೋಡು ಸೇತುವೆ ಭರ್ತಿಯಾಗಿದೆ. ವಾಣಿವಿಲಾಸ ಸಾಗರ ಜಲಾಶಯವನ್ನು ಈ ನೀರು ಸೇರುತ್ತಿದೆ. ಕೆಲವೆಡೆ ತೋಟಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಅಲ್ಲಲ್ಲಿ ಅವಾಂತರಗಳು ಸೃಷ್ಟಿಯಾಗಿವೆ. ಸಿಡಿಲಿಗೆ ಕೊಪ್ಪಳ ಮತ್ತು ನೆಲಮಂಗಲದಲ್ಲಿ ತಲಾ ಒಬ್ಬರು ಬಲಿ ಆಗಿದ್ದಾರೆ. ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ ಆಗ್ತಿದೆ. ಅಜ್ಜಂಪುರದ ಸೇತುವೆಗಳು ಜಲಾವೃತವಾಗಿದೆ.
- Advertisement
ದಂದೂರು-ಚೀರನಹಳ್ಳಿ ಸಂಪರ್ಕ ಕಡಿದುಹೋಗಿದೆ. ಚಾರ್ಮಾಡಿಘಾಟ್‌ನಲ್ಲಿ ದಾರಿ ಗೊತ್ತಾಗದೇ ಬಸ್-ಲಾರಿ ಮುಖಾಮುಖಿ ಡಿಕ್ಕಿ ಹೊಡೆದಿದೆ. ನೂರಾರು ವಾಹನ ಸಾಲು ಗಟ್ಟಿವೆ. ಕಳಸಾ ಬಳಿ ರಸ್ತೆ ಗೊತ್ತಾಗದೇ ಕಾರೊಂದು ತೋಟಕ್ಕೆ ನುಗ್ಗಿದೆ. ಚನ್ನರಾಯಪಟ್ಟಣದಲ್ಲಿ ರಸ್ತೆ ಮೇಲೆ ನದಿಯೋಪಾದಿಯಲ್ಲಿ ನೀರು ಹರಿದಿದೆ. ಶಿವಮೊಗ್ಗದ ಗುಡ್ಡೆಕಲ್‌ನಲ್ಲಿ ಮದುವೆ ಛತ್ರಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮಳೆಯ ನೀರಿನ ನಡುವೆಯೂ ಊಟೋಪಚಾರ ಮುಂದುವರೆದಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಧಾರಾಕಾರ ಮಳೆ; ರಸ್ತೆಗಳಲ್ಲಿ ಹರಿದ ನೀರು
ಕೊರಟಗೆರೆಯ ಬೈರೇನಹಳ್ಳಿಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ದಾವಣಗೆರೆಯ ದೊಡ್ಡಬಾತಿಯಲ್ಲಿ 20 ಕ್ಕೂ ಹೆಚ್ಚು ಎಕರೆ ಭತ್ತದ ಬೆಳೆ ನಾಶವಾಗಿದೆ. ಹಾಸನ, ಮೈಸೂರು, ಮಂಡ್ಯ, ರಾಮನಗರ, ಚಾಮರಾಜನಗರ, ಕೊಪ್ಪಳ, ವಿಜಯನಗರ, ಹಾವೇರಿ ಸೇರಿ ಹಲವೆಡೆ ಉತ್ತಮ ಮಳೆ ಆಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಇಂದಿನಿಂದ ಮೂರು ದಿನ ದಕ್ಷಿಣ ಒಳನಾಡಿನಲ್ಲಿ ಆರೆಂಜ್ ಅಲರ್ಟ್ ಜಾರಿ ಮಾಡಲಾಗಿದೆ. ಈ ಮಧ್ಯೆ ನಿಕೋಬಾರ್ ದ್ವೀಪಗಳನ್ನು ಮುಂಗಾರು ಮಾರುತಗಳು ಇಂದು ತಲುಪಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.