ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ಸಂಜೆ ವೇಳೆಗೆ ಸುರಿದ ಬಿರುಗಾಳಿ ಸಹಿತ ಮಳೆಯ ಆರ್ಭಟಕ್ಕೆ ಕೋಳಿ ಫಾರಂ ಮೇಲ್ಛಾವಣಿ ಕುಸಿದು ಸುಮಾರು 5 ಸಾವಿರ ಕೋಳಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಅರಶಿಣಗೇರಿ ನಡೆದಿದೆ.
ಅರಶಿಣಗೇರಿಯ ಹಜರತ್ ಅಲಿ ಎಂಬವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಕೋಳಿ ಫಾರಂ ನೆಲಸಮ ಆಗಿರುವುದಿಂದ ಸುಮಾರು 15 ಲಕ್ಷ ಹಾನಿ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಜಿಲ್ಲೆಯ ಮುಂಡಗೋಡು, ಶಿರಸಿ, ಯಲ್ಲಾಪುರಗಳಲ್ಲಿ ಗುಡುಗು ಸಹಿತ ಬಿರುಗಾಳಿ ಬೀಸಿದ್ದು, ಅಲ್ಪ ತುಂತುರು ಮಳೆಯಾಗಿದ್ದು ಕರಾವಳಿಯಲ್ಲಿ ಮೋಡ ಕವಿದ ವಾತಾವರಣ ಸೃಷ್ಟಿಯಾಗಿದೆ.
ಇತ್ತ ರಾಜಧಾನಿ ಬೆಂಗಳೂರು ಸೇರಿದಂತೆ ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಹಲವು ಭಾಗಗಳಲ್ಲಿಯೂ ಮಳೆಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಫಾನಿ ಚಂಡಮಾರುತದಿಂದ ಬಿರುಗಾಳಿ ಸಹಿತ ಮಳೆ ಆಗುವ ನಿರೀಕ್ಷೆ ಇರುವುದಿಂದ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ.