ಹಾವೇರಿ: ಇಂದು ಸಂಜೆ ವೇಳೆಗೆ ಸುರಿದ ಭಾರೀ ಮಳೆಗೆ ಪಕ್ಕದ ಮನೆಯ ಗೋಡೆ ಕುಸಿದು ಬಿದ್ದು ಐದು ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಹೋತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಐದು ವರ್ಷದ ಸಂದೀಪ ಮೆಳ್ಳಳ್ಳಿ ಎಂದು ಗುರುತಿಸಲಾಗಿದ್ದು, ಘಟನೆಯಲ್ಲಿ 6 ವರ್ಷದ ಪ್ರತಾಪ, ಹದಿಮೂರು ವರ್ಷದ ರಕ್ಷಿತಾ ಮತ್ತು ನಾಲ್ವತ್ತೈದು ವರ್ಷದ ನೀಲಮ್ಮ ಎಂಬುವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಅಕ್ಕಿಆಲೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಗ್ರಾಮದ ಗುಡ್ಡಪ್ಪ ಅಂಗಡಿ ಎಂಬುವರ ಮನೆಗೆ ಮಕ್ಕಳು ಆಟವಾಡಲು ತೆರಳಿದ್ದ ವೇಳೆ ಗುಡ್ಡಪ್ಪನ ಪಕ್ಕದ ಮನೆಯ ಗೋಡೆ ಬಿದ್ದು ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಆಡೂರು ಠಾಣೆ ಪಿಎಸ್‍ಐ ಆಂಜನೇಯ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
Advertisement
ಹಾವೇರಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸಂಜೆ ಆಗುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಬೆಳಗ್ಗಿನಿಂದ ಸಂಜೆವರೆಗೂ ಬಿಸಿಲಿನ ತಾಪ ಹೆಚ್ಚಾಗಿದ್ದರೆ, ರಾತ್ರಿ ವೇಳೆಗೆ ಗುಡುಗು ಸಿಡಿಲಲು ಸಮೇತ ಧಾರಾಕಾರವಾಗಿ ಮಳೆಯಾಗುತ್ತಿದೆ. ಜಿಲ್ಲೆಯ ರಾಣೇಬೆನ್ನೂರು, ಸವಣೂರು ಹಾಗೂ ಹಾವೇರಿ ನಗರದ ಸೇರಿದಂತೆ ಸುತ್ತಮುತ್ತಲಿನ ಭಾಗದಲ್ಲಿ ಮಳೆಯ ಆರ್ಭಟ ಹೆಚ್ಚಾಗಿದೆ.
Advertisement
ಸಿಡಲಿಗೆ 3 ಸಾವು: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಗದಗ ತಾಲೂಕಿನ ಕಿರಟಗೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತರನ್ನು ದ್ರಾಕ್ಷಾಯಿಣಿ ತೋಟಗೇರಿ (35), ವಿಜಯಲಕ್ಷ್ಮಿ ತೋಟಗೇರಿ (39) ಎಂದು ಗುರುತಿಸಲಾಗಿದೆ. ಮೃತರಿಬ್ಬರು ಒಂದೇ ಕುಟುಂಬದವರಾಗಿದ್ದು, ಘಟನೆ ಬಗ್ಗೆ ಮಾಹಿತಿ ಪಡೆದ ಬೆಟಗೇರಿ ಪೊಲೀಸರು, ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ರಾಜನಾಳ ಗ್ರಾಮದ ಸುಶಿಲೆವ್ವ ಪರಸಪ್ಪ ಚಿಮ್ಮಲಗಿ (50) ಎಂಬವರು ಕೂಡ ಸಿಡಿಲಿಗೆ ಬಲಿಯಾಗಿದ್ದು, ಜಮೀನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.