ಬೆಂಗಳೂರು: ಕೊರೊನಾ ಭೀತಿ ನಡುವೆಯೇ ರಾಜ್ಯದ ಹಲವೆಡೆ ಮಳೆರಾಯನ ಆರ್ಭಟ ಜೋರಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಇಂದು ಆನೆಕಲ್ಲು ಸಹಿತ ಭಾರೀ ಮಳೆಯಾಗಿದೆ.
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ದಿನ ಬಿಟ್ಟು ದಿನ ಮಳೆಯ ಅಬ್ಬರ ಜೋರಾಗ್ತಾನೆ ಇದೆ. ಜನಸಾಮಾನ್ಯರಿಗೆ ಒಂದೆಡೆ ಕೊರೊನಾ ಆತಂಕ, ಮತ್ತೊಂದೆಡೆ ಮಳೆ ಭಯವೂ ಎದುರಾಗಿದೆ. ಜಿಲ್ಲೆಯ ಮಲೆನಾಡಿನ ಕೆಲ ಭಾಗದಲ್ಲಿ ಸೋಮವಾರ ಧಾರಾಕಾರವಾಗಿ ಸುರಿದಿದ್ದ ಮಳೆ ಮಂಗಳವಾರ ಸ್ವಲ್ಪ ಬಿಡುವು ನೀಡಿತ್ತು. ಇಂದು ಮತ್ತೆ ಮಳೆಯ ಅಬ್ಬರ ಜೋರಾಗಿದೆ. ಜಿಲ್ಲೆಯ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಬಾಳೆಹೊನ್ನೂರು, ತರೀಕೆರೆಯಲ್ಲಿ ಭಾರೀ ಮಳೆಯಾಗಿದೆ. ಕಳೆದ ವರ್ಷ ದಾಖಲೆ ಮಳೆ ಸುರಿದಿದ್ದ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಜಾವಳಿ, ಬಾಳೂರು, ಚಾರ್ಮಾಡಿ ಘಾಟ್ ಹಾಗೂ ಬಣಕಲ್‍ನಲ್ಲಿ ಭಾರೀ ಗಾಳಿಯೊಂದಿಗೆ ಧಾರಾಕಾರ ಮಳೆ ಸುರಿದಿದೆ.
Advertisement
Advertisement
ಮೂಡಿಗೆರೆ ತಾಲೂಕಿನ ಕಸ್ಕೆಬೈಲ್ ಗ್ರಾಮದಲ್ಲಿ ಕೊರೋನ ಲಾಕ್ ಡೌನ್ ಡ್ಯೂಟಿ ಮಾಡುತ್ತಿದ್ದ ಪೊಲೀಸರು ಹಾಕಿಕೊಂಡಿದ್ದ ಶಾಮಿಯಾನವೇ ಗಾಳಿಗೆ ಹಾರಿ ಹೋಗಿದೆ. ಬಳಿಕ ಅದನ್ನ ಪೊಲೀಸರೇ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ಚಾರ್ಮಾಡಿ ಘಾಟಿಯಲ್ಲಿ ಭಾರೀ ಮಳೆಯಾಗಿದ್ದು, ಓಡಾಡ್ತಿರೋ ಕೆಲವೇ ಕೆಲವು ಗಾಡಿಗಳು ಕೂಡ ದಾರಿ ಕಾಣದೆ ನಿಂತಲ್ಲೇ ನಿಂತಿವೆ. ಭಾರೀ ಮಳೆಯಿಂದ ಮಳೆ ನೀರು ರಸ್ತೆ ಹಾಗೂ ತಗ್ಗು ಪ್ರದೇಶಗಳಲ್ಲಿ ಹರಿದಿದೆ. ಕೆಲವೆಡೆ ಆಲಿಕಲ್ಲು ಮಳೆಯಾಗಿದ್ದು, ರೈತರಿಗೆ ಬೆಳೆ ಹಾಳಾಗುತ್ತದೆ ಎಂಬ ಆತಂಕ ಕೂಡ ಶುರುವಾಗಿದೆ.
Advertisement
Advertisement
ಕೊಡಗು ಜಿಲ್ಲೆಯ ಹಲವೆಡೆ ಕೂಡ ವರುಣ ಅಬ್ಬರಿಸಿದ್ದಾನೆ. ವಿರಾಜಪೇಟೆ, ಗೋಣಿಕೊಪ್ಪ, ಸಿದ್ದಾಪುರದಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ. ಆಲಿಕಲ್ಲು ಸಹಿತ ವರುಣ ಅಬ್ಬರಿಸುತ್ತಿದ್ದಾನೆ. ಕಳೆದ ಒಂದು ವಾರದಲ್ಲಿ ಮೂರು ದಿನ ಉತ್ತಮ ಮಳೆಯಾಗಿದ್ದು, ಕಾಫಿ ಬೆಳೆಗಾರರ ಮೊಗದಲ್ಲಿ ಸಂತಸ ಮೂಡಿಸಿದೆ.
ಇತ್ತ ಶಿವಮೊಗ್ಗದಲ್ಲಿ ಸಂಜೆಯಿಂದಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು ಹೀಗಾಗಿ ಗುಡುಗು, ಸಿಡಿಲು ಸಹಿತ ಮಳೆ ಸುರಿದಿದೆ. ಬಿಸಿಲಿನಿಂದ ಬಳಲಿದ್ದ ಜನತೆಗೆ ವರುಣ ತಂಪೇರೆದಿದ್ದಾನೆ. ಜಿಲ್ಲೆಯ ಅಲ್ಲಲ್ಲಿ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ.
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿವಿದೆಡೆ ವರುಣ ಸಿಂಚನವಾಗಿದೆ. ಚಳ್ಳಕೆರೆ, ಹೊಸದುರ್ಗ ತಾಲೂಕು ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ. ಗುಡುಗು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಬೇಸಿಗೆಯಿಂದ ಕಾದಿದ್ದ ಭೂಮಿ ತಂಪಾಗಿದೆ.
ಕೊರಾನಾ ಹಾಟ್‍ಸ್ಪಾಟ್ ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಧಾರಾಕಾರ ಮಳೆಯಾಗಿದೆ. ತಡರಾತ್ರಿ ಗೌರಿಬಿದನೂರು ನಗರದಲ್ಲಿ ಭಾರೀ ಮಳೆ ಸುರಿದಿತ್ತು. ಮಳೆಯಿಂದ ರೈಲ್ವೆ ಅಂಡರ್ ಪಾಸ್‍ಗಳು ಜಲಾವೃತವಾಗಿದ್ದು, ಅಂಡರ್ ಪಾಸ್‍ಗಳಲ್ಲಿ ನೀರು ತೆರವುಗೊಳಿಸಲು ನಗರಸಭೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಕೊರೊನಾ ಭೀತಿ ನಡುವೆ ಮಳೆ ತಂದ ಅವಾಂತರಕ್ಕೆ ಜನ ಹೈರಾಣಾಗಿದ್ದಾರೆ. ಇತ್ತ ಚಿಂತಾಮಣಿ ನಗರದಲ್ಲಿಯೂ ಇಂದು ಧಾರಾಕಾರ ಮಳೆ ಆಗುತ್ತಿದೆ.
ರೇಷ್ಮೆನಗರಿ ರಾಮನಗರದಲ್ಲೂ ಗುಡುಗು, ಸಿಡಿಲು ಸಹಿತ ಜೋರು ಮಳೆ ಆಗಿದೆ. ಅಕಾಲಿಕ ಮಳೆಯಿಂದಾಗಿ ಅನಗತ್ಯವಾಗಿ ರಸ್ತೆಗಿಳಿದಿದ್ದ ವಾಹನ ಸವಾರರು ಪರದಾಡುವಂತಾಗಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸವಾರರು ಮಳೆಯಿಂದ ಹೈರಾಣಾಗಿದ್ದಾರೆ.