ರಾಮನಗರ: ಕುಂಭದ್ರೋಣ ಮಹಾಮಳೆಗೆ ರೇಷ್ಮೆನಗರಿ ರಾಮನಗರ ಅಕ್ಷರಶಃ ತತ್ತರಿಸಿದೆ. ಇತಿಹಾಸದಲ್ಲೇ ಕಂಡುಕೇಳರಿಯದ ರೀತಿಯಲ್ಲಿ ಜಲಪ್ರಳಯವಾಗಿದ್ದು ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜನಜಾನುವಾರುಗಳಿಗೆ ಹಾನಿಯಾಗಿದೆ.
Advertisement
ಇಡೀ ರಾಜ್ಯದಲ್ಲಿ ಅತೀ ಸುರಕ್ಷಿತ ಜಿಲ್ಲೆಗಳ ಸಾಲಿನಲ್ಲಿದ್ದ ರಾಮನಗರ ಈಗ ಅಕ್ಷರಶಃ ಮಳೆಗೆ ತತ್ತರಿಸಿದೆ. ಬಯಲುಸೀಮೆ ಜಿಲ್ಲೆ ಮಾತ್ರವಲ್ಲದೇ, ಸುತ್ತಲೂ ಬೆಟ್ಟಗುಡ್ಡಗಳಿಂದ ಕೂಡಿದ್ದರಿಂದ ಯಾವುದೇ ಕಾರಣಕ್ಕೂ ಅತಿವೃಷ್ಟಿಯಾಗುವುದೇ ಇಲ್ಲ ಎಂಬ ಜನರ ನಂಬಿಕೆಯನ್ನು ವರುಣದೇವ ಹುಸಿ ಮಾಡಿದ್ದಾನೆ. ಕಳೆದ 30ವರ್ಷಗಳಲ್ಲೇ ಹೆಚ್ಚು ಮಳೆ ಆಗಿದ್ದು, ರಾಮನಗರದಲ್ಲಿ ವಾಡಿಕೆಗಿಂತ ಶೇ.700ರಷ್ಟು ಅಧಿಕ ಮಳೆ ದಾಖಲಿಸಿದೆ. ರಾಮನಗರ, ಚನ್ನಪಟ್ಟಣ ತಾಲೂಕುಗಳು ಅಕ್ಷರ ಸಹ ನೀರಿನಲ್ಲಿ ಮುಳುಗುವ ಹಂತ ತಲಪಿವೆ. ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಬೆಂಗಳೂರು-ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.
Advertisement
Advertisement
ಜಿಲ್ಲೆಯ ಭಕ್ಷಿಕೆರೆ ಕೋಡಿ ಒಡೆದ ಪರಿಣಾಮ ಟಿಪ್ಪು ನಗರ, ಅರ್ಕಾವತಿ ಬಡಾವಣೆ, ಗೌಸಿಯಾ ನಗರ ಸೇರಿ ಬಹುತೇಕ ವಸತಿ ಪ್ರದೇಶಗಳು ಜಲಾವೃತವಾಗಿವೆ. ಬೈಕ್, ಕಾರುಗಳು, ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ. ಹಲವು ಗ್ರಾಮಗಳಲ್ಲಿ ರೈತರ ಜಮೀನು, ಮನೆಗಳಿಗೆ ಹಾನಿಯಾಗಿದೆ. ನಗರದಲ್ಲಿ ಪ್ರವಾಹಕ್ಕೆ ಸಾವಿರಾರು ಮನೆಗಳು ಮುಳುಗಡೆಯಾಗಿ ಜನರು ಸಂತ್ರಸ್ತರಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಇನ್ನು 4 ದಿನ ಮಳೆ ಅಬ್ಬರ – ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Advertisement
ಮಳೆಹಾನಿ ಪ್ರದೇಶಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರಾದ ಆರ್.ಅಶೋಕ್, ಅಶ್ವಥ್ ನಾರಾಯಣ್ ಭೇಟಿ ನೀಡಿ ವೀಕ್ಷಣೆ ಮಾಡಿದ್ದಾರೆ. ಸಂಕಷ್ಟದಲ್ಲಿದ್ದ ಜನತೆಗೆ ಧೈರ್ಯ ತುಂಬುವುದರ ಜೊತೆಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಜೊತೆಗೆ ಡಿಸಿ ಖಾತೆಯಲ್ಲಿರುವ ಹಣದಿಂದ ತಕ್ಷಣಕ್ಕೆ ಹಾನಿಗೊಳಗಾದ ಕುಟುಂಬಕ್ಕೆ 10 ಸಾವಿರ ತಾತ್ಕಾಲಿಕ ಪರಿಹಾರ, ಒಂದು ತಿಂಗಳ ಪಡಿತರ ನೀಡುವುದಾಗಿ ತಿಳಿಸಿದ್ದಾರೆ. ಮಳೆಹಾನಿ ಸಂಪೂರ್ಣ ಸರ್ವೇ ಮಾಡಿ ವರದಿಯನ್ನು ಸರ್ಕಾರಕ್ಕೆ ತಿಳಿಸುವಂತೆ ಸೂಚಿಸಿದ್ದಾರೆ.
ಜಲಸ್ಫೋಟಕ್ಕೆ ರಾಮನಗರ ಜಿಲ್ಲೆ ಜನತೆ ನಲುಗಿಹೋಗಿದ್ದು ಇನ್ನೂ ಎಂದೂ ಇಂತಹ ಮಹಾಮಳೆ ಸುರಿಯದಂತೆ ಪ್ರಾರ್ಥಿಸುವಂತಾಗಿದೆ. ಇದನ್ನೂ ಓದಿ: ಬೆಂಗ್ಳೂರಿನ ಶಾಲಾ ಕಾಲೇಜುಗಳಿಗೆ ಮಂಗಳವಾರ ರಜೆ ಘೋಷಣೆ