ಮಡಿಕೇರಿ: ಕೊಡಗು ಎಂದ ತಕ್ಷಣ ಎಲ್ಲರ ಕಣ್ಮುಂದೆ ಬರುತ್ತಿದ್ದ ಚಿತ್ರಣ ಜಲಪ್ರಳಯದಿಂದಾಗಿ ಸಂಪೂರ್ಣ ಬದಲಾಗಿದೆ. ಮಳೆ ನಿಂತರೂ ಗುಡ್ಡಗಳು ಇನ್ನೂ ಕುಸಿಯುತ್ತಲೇ ಇವೆ. ಮತ್ತೆ ಮಳೆ ಬಂದ್ರೆ ಮನೆಗಳು ಮಣ್ಣಲ್ಲಿ ಸಮಾಧಿಯಾಗಲಿವೆ. ನಾಲ್ಕು ದಿನಗಳ ಕಾಲ ಅಕ್ಷರಶಃ ಜಲ ಪ್ರವಾಹದಲ್ಲಿ ಮುಳುಗಿದ್ದ ಮಡಿಕೇರಿ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಇತಿಹಾಸದಲ್ಲೇ ಕಂಡು ಕೇಳರಿಯದ ಜಲಪ್ರಳಯಕ್ಕೆ ಸಿಲುಕಿ ನೆಲಸಮವಾಗಿರೋ ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಇಳಿಮುಖವಾಗಿದೆ. ಪ್ರವಾಹ ಪರಿಸ್ಥಿತಿ ತಗ್ಗಿದೆ. ಮಡಿಕೇರಿಯಲ್ಲಿ ರಕ್ಷಣಾ ಕಾರ್ಯ ಚುರುಕು ಪಡೆದಿದೆ. ಆದರೆ, ಕೊಡವರು ನಿಟ್ಟುಸಿರು ಬಿಡುವ ಸ್ಥಿತಿಯಲ್ಲಿಲ್ಲ. ಪ್ರವಾಹದ ಅಬ್ಬರಕ್ಕೆ ಮರದ ದಿಮ್ಮಿಗಳ ರಾಶಿಯಲ್ಲಿ ಮನೆ ಬಂಧಿಯಾಗಿದೆ. ಗುಡ್ಡಗಳು ಕುಸಿಯುತ್ತಲೇ ಇವೆ. ಧರೆ ಕುಸಿದು ಮನೆಯೊಳಗೆ ಪ್ರವಾಹದಂತೆ ಮಣ್ಣಿನ ರಾಶಿಯೇ ನುಗ್ಗುತ್ತಿದೆ.
Advertisement
Advertisement
ಕುಶಾಲನಗರದ ಕುವೆಂಪು ಬಡಾವಣೆಯಲ್ಲಿ ನಾಲ್ಕು ದಿನ ಮನೆಯೊಳಗೆ ನೀರು ನಿಂತ ಕಾರಣ ಎಲ್ಲಾ ಮನೆಗಳ ಗೃಹೋಪಯೋಗಿ ವಸ್ತುಗಳು ಹಾಳಾಗಿವೆ. ಇತ್ತ ಮಳೆ ಪ್ರಮಾಣ ಕಡಿಮೆಯಾಗುತ್ತಿದ್ದಂತೆ, ನಿರಾಶ್ರಿತರಿಗೆ ಅಗತ್ಯ ಸೌಲಭ್ಯ ಒದಗಿಸುವ ಕೆಲಸ ಆರಂಭವಾಗಿದೆ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಾಂಕ್ರಾಮಿಕ ಕಾಯಿಲೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಅಂತ ಸ್ಪಷ್ಟಪಡಿಸಿದ್ರು.
Advertisement
ಕೊಡಗಿನಲ್ಲಿ ಮಾತ್ರವಲ್ಲದೇ ದಕ್ಷಿಣ ಕನ್ನಡ ಜೀಲ್ಲೆಯಲ್ಲೂ ಮಳೆಯಿಂದಾಗಿ ಭೂ ಕುಸಿತವಾಗ್ತಿದೆ. ದಕ್ಷಿಣ ಕನ್ನಡ-ಕೊಡಗು ಗಡಿಭಾಗವಾದ ಸುಳ್ಯ ತಾಲೂಕಿನ ಕಲ್ಮಕಾರು ಬಳಿಯ ಕಡಮಕಲ್ಲು ದಟ್ಟ ಅರಣ್ಯದಲ್ಲಿ ಭೀಕರ ಸ್ಫೋಟ ಉಂಟಾಗಿದೆ. ಈ ಹಿನ್ನೆಲೆ ಸುಮಾರು 50 ಎಕರೆಯಷ್ಟು ಅರಣ್ಯ ಮರಗಳ ಸಮೇತ ಕೊಚ್ಚಿ ಹೋಗಿದೆ. ಈ ದುರಂತದ ರಭಸಕ್ಕೆ ಕಡಮಕಲ್ಲು ಎಸ್ಟೇಟ್ ಒಳಗಿದ್ದ ಸೇತುವೆಯೂ ಕುಸಿದಿದೆ.
Advertisement
ಕೂಜುಮಲೆ ಅರಣ್ಯ ವ್ಯಾಪ್ತಿಯಲ್ಲಿ ಭೂಮಿ ಬಿರುಕು ಬಿಟ್ಟಿದ್ದು, ಆಸುಪಾಸಿನ ಕಲ್ಮಕಾರು, ಬಾಳುಗೋಡು ಗ್ರಾಮಗಳ 30ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ. ಕಡಮಕಲ್ ಎಸ್ಟೇಟ್‍ನಲ್ಲಿ ಭೂಮಿ ಕುಸಿತ ಭೀತಿಯಲ್ಲೇ ಕಾರ್ಮಿಕರು ಊರನ್ನೇ ಬಿಟ್ಟು ಹೋಗಿದ್ದಾರೆ.
ಸಕಲೇಶಪುರ ತಾಲೂಕಿನ ಹಲವೆಡೆ ಗುಡ್ಡ ಕುಸಿತ ಸಂಭವಿಸಿದೆ. ಬಿಸಿಲೆ- ಸುಬ್ರಮಣ್ಯ ರಸ್ತೆ, ಹೆತ್ತೂರು ರಸ್ತೆ ಕುಸಿತಗೊಂಡಿದೆ. ಹಾಗಾಗಿ ಗೋವಾದಿಂದ ಬಿಡುವ ನಿಜಾಮುದ್ದಿನ್ ಎಕ್ಸ್ ಪ್ರೆಸ್ ರೈಲು ಹಾಗೂ ಎರ್ನಾಕುಲಮ್ ರೈಲು ರದ್ದುಗೊಂಡಿದೆ.
ಇದೆಲ್ಲಾ ಮಳೆಯ ಅನಾಹುತಗಳಾದ್ರೆ, ಇತ್ತ ಕೊಡಗಿನಲ್ಲಿ ಕಿಡಿಗೇಡಿಗಳು ಅದನ್ನೇ ಬಂಡವಾಳ ಮಾಡಿಕೊಂಡು ಮನೆಯಲ್ಲಿ ಇದ್ದ ವಸ್ತುಗಳುನ್ನು ಕಳವು ಮಾಡಲು ಮುಂದಾಗಿದ್ದಾರೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=hGBKMiDzWwo