ಉಡುಪಿ: ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದೆ. ವರ್ಷಧಾರೆಯ ನಡುವೆಯೇ 73ನೇ ಸ್ವಾತಂತ್ರೋತ್ಸವವನ್ನು ಜಿಲ್ಲಾಡಳಿತ ಕಡೆಯಿಂದ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಹೆಚ್ಚಿಸಿ ಜನಜಾಗೃತಿ ಮೂಡಿಸಲು ಉಡುಪಿ ಜಿಲ್ಲಾ ಪಂಚಾಯತ್ ಟ್ಯಾಬ್ಲೋ ಕೈಕೊಟ್ಟಿದೆ.
ಜಲವರ್ಷ 2019- ಮಳೆ ನೀರು ಸಂರಕ್ಷಣೆಯನ್ನು ಸಾರುವ ಟ್ಲ್ಯಾಬ್ಲೋವನ್ನು ಉಡುಪಿ ಜಿಲ್ಲಾ ಪಂಚಾಯತ್ ಸಿದ್ಧಪಡಿಸಿತ್ತು. ಟ್ಯಾಬ್ಲೋವನ್ನು ಜಿಲ್ಲಾ ಕ್ರೀಡಾಂಗಣಕ್ಕೆ ತಂದು ನಿಲ್ಲಿಸಲಾಗಿತ್ತು. ಪಥಸಂಚಲನ ನಂತರ ಇನ್ನೇನೋ ಮೈದಾನಕ್ಕೆ ಒಂದು ಸುತ್ತು ತರಬೇಕು ಎನ್ನುವಷ್ಟರಲ್ಲಿ ಭಾರೀ ಗಾಳಿ ಮಳೆಯಾಗಿದೆ. ಟ್ಯಾಬ್ಲೋ ವಾಹನ ನಿಂತಲ್ಲೇ ಕೈ ಕೊಟ್ಟಿದೆ.ಭಾರೀ ಮಳೆಗೆ ವಾಹನ ಚಾಲು ಆಗ್ತಿಲ್ಲ. ಕೆಟ್ಟು ನಿಂತಿದೆ ಸರ್ ಎಂದು ಚಾಲಕ ಪೊಲೀಸರಲ್ಲಿ ಹೇಳಿದ್ದಾನೆ.
Advertisement
Advertisement
ತಳ್ಳಿ ಜರ್ಕ್ ಹಾಕುವ ಪ್ರಯತ್ನ ಮಾಡಿದರೂ ಸ್ಟಾರ್ಟ್ ಆಗಲೇ ಇಲ್ಲ. ಅಷ್ಟೊತ್ತಿಗೆ ಪಥ ಸಂಚಲನ ಮುಗಿದು ಡಿಸಿ ಭಾಷಣ ಶುರು ಮಾಡಿದ್ದರು. ಇನ್ನು ಟ್ಯಾಬ್ಲೋ ಮೈದಾನದ ಬದಿಯಲ್ಲೇ ನಿಂತಿದ್ದರೆ ಆಭಾಸ ಆಗುತ್ತೆ ಎಂದು ಸಂಬಂಧಪಟ್ಟವರು ಟ್ಯಾಬ್ಲೋವನ್ನು ಮೈದಾನದಿಂದ ಹೊರಕ್ಕೆ ತಳ್ಳಿ ಸೈಡಿಗಿಟ್ಟರು. ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ್ ಮಳೆ ನೀರು ಉಳಿಸುವ ಜನಜಾಗೃತಿ ಕಾರ್ಯಕ್ರಮದ ಟ್ಯಾಬ್ಲೋ ಭಾರೀ ಮಳೆಗೇ ಕೈಕೊಟ್ಟಿದ್ದು ನಗೆಪಾಟಲಿಗೆ ಕಾರಣವಾಯಿತು.