ಚಾಮರಾಜನಗರ: ಬೆಂಕಿ ಬಿದ್ದು ಬಂಡೀಪುರ ಹುಲಿರಕ್ಷಿತಾರಣ್ಯ ಸುಟ್ಟು ಭಸ್ಮವಾಗಿತ್ತು. ಆದರೆ ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗಿಡ ಮರಗಳು ಚಿಗುರೊಡೆಯಲಾರಂಭಿಸಿವೆ. ಹಸಿರು ಕಾನನದ ನಡುವೆ ಹುಲಿ, ಚಿರತೆ, ಆನೆ, ಜಿಂಕೆ, ಕಡವೆ ಮೊದಲಾದ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುತ್ತಿವೆ. ಈ ವನ್ಯ ಸಂಪತ್ತನ್ನು ಕಣ್ತುಂಬಿಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಬಂಡೀಪುರಕ್ಕೆ ಬರುತ್ತಿದ್ದಾರೆ.
ಬೆಂಕಿ ಬಿದ್ದಿದ್ದ ಜಿಲ್ಲೆಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ನಿಧಾನವಾಗಿ ತನ್ನ ಮೊದಲ ರೂಪ ಪಡೆದು ಕೊಳ್ಳಲಾರಂಭಿಸಿದೆ. ಕಳೆದ 20 ದಿನಗಳಿಂದ ಬೀಳುತ್ತಿರುವ ಮಳೆಯಿಂದ ಬಂಡೀಪುರ ಹುಲಿರಕ್ಷಿತಾರಣ್ಯ ಹಸಿರ ವನರಾಶಿಯಿಂದ ಕಂಗೊಳಿಸುತ್ತಿದೆ. ನಿಧಾನಗತಿಯಲ್ಲಿ ಕೆರೆಕಟ್ಟೆಗಳು ತುಂಬಲಾರಂಭಿಸಿವೆ. ಅಷ್ಟೇ ಅಲ್ಲದೆ ಎಲ್ಲೆಡೆ ಹಸಿರಿನಿಂದ ಪ್ರಕೃತಿಯ ಸೊಬಗು ಇಮ್ಮಡಿಗೊಂಡಿದೆ.
Advertisement
Advertisement
ಸುಮಾರು 1024 ಸಾವಿರ ಚದರ ಕಿ.ಮೀ ವ್ಯಾಪ್ತಿಯಲ್ಲಿ ವಿಸ್ತರಿಸಿರುವ ಈ ಹುಲಿ ಸಂರಕ್ಷಿತ ಅರಣ್ಯ ದಕ್ಷಿಣ ಭಾರತದ ಅತಿ ದೊಡ್ಡ ಸಂರಕ್ಷಿರತ ಪ್ರದೇಶವೂ ಆಗಿದೆ. 160ಕ್ಕೂ ಹೆಚ್ಚು ಹುಲಿಗಳು, ಎರಡು ಸಾವಿರಕ್ಕೂ ಹೆಚ್ಚು ಆನೆಗಳು ಸೇರಿದಂತೆ ಚಿರತೆ ಕರಡಿ, ಜಿಂಕೆ, ಕಾಡೆಮ್ಮೆ, ಮೊದಲಾದ ವನ್ಯಜೀವಿಗಳ ಆವಾಸ ಸ್ಥಾನವಾಗಿದೆ. ವಾರ್ಷಿಕ 450 ಮಿ.ಮೀ ವಾಡಿಕೆ ಮಳೆಯಾಗುವ ಬಂಡೀಪುರದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಾಂಭಿಸಿದೆ. ಹಸಿರಾಗಿರುವ ಹುಲಿ ಸಂರಕ್ಷಿತ ಪ್ರದೇಶದ ಮಧ್ಯೆ ಸಫಾರಿ ಮಾಡೋದಂತೂ ಮನಸಿಗೆ ಆಹ್ಲಾದ ಉಂಟು ಮಾಡುತ್ತಿದೆ. ಹೇಳಿ ಕೇಳಿ ಈಗ ಬೇಸಿಗೆ ರಜೆ ಬೇರೆ ಇರುವುದರಿಂದ ಪ್ರವಾಸಿಗರ ದಂಡೇ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದತ್ತ ಹರಿದು ಬರುತ್ತಿದೆ ಎಂದು ಪ್ರವಾಸಿಗರಾದ ರಾಜೇಶ್ವರಿ ಹೇಳಿದ್ದಾರೆ.
Advertisement
Advertisement
ಚಾಮರಾಜನಗರ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಬೀಳುತ್ತಿರುವುದರಿಂದ ಮೇ ತಿಂಗಳಿನಿಂದಲೇ ಬಂಡೀಪುರ ಕಳೆಗಟ್ಟಿದೆ. ನೀರು ಹಾಗೂ ಮೇವಿನ ಚಿಂತೆ ಇಲ್ಲದೆ ವನ್ಯಜೀವಿಗಳು ಸ್ವಚ್ಛಂದವಾಗಿ ವಿಹರಿಸುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಕೆರೆಕಟ್ಟೆಗಳಿಗೆ ನೀರು ಕುಡಿಯಲು, ಇಲ್ಲವೇ ಹಸಿರು ಹುಲ್ಲು ಮೇಯಲು ಬರುವ ಕಾಡಮ್ಮೆ, ಜಿಂಕೆ, ಕಡವೆಯಂತಹ ಪ್ರಾಣಿಗಳನ್ನ ನೋಡಿದರೆ ಮನಸ್ಸು ಮುದಗೊಳ್ಳುತ್ತದೆ ಎಂದು ಸತೀಶ್ ತಿಳಿಸಿದ್ದಾರೆ.
ನಿರೀಕ್ಷಿತ ಪ್ರಮಾಣದ ಮಳೆಯಿಂದ ಬಂಡೀಪುರದಲ್ಲಿ ಪ್ರಕೃತಿ ಸೊಬಗು ಇಮ್ಮಡಿಗೊಂಡಿದೆ. ನಿತ್ಯ ನೂರಾರು ಪ್ರವಾಸಿಗರು ಹಚ್ಚ ಹಸಿರಿನಿಂದ ಕಂಗೊಳಿಸುವ ಬಂಡೀಪುರ ಹಾಗೂ ಇಲ್ಲಿನ ವನ್ಯಜೀವಿಗಳ ವೀಕ್ಷಣೆಗೆಂದು ಬರತೊಡಗಿದ್ದಾರೆ.