– 5 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಮಂಗಳೂರು: ಕರಾವಳಿಯಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗುವ (Rain) ಮುನ್ಸೂಚನೆಯನ್ನು ರಾಜ್ಯ ಹವಾಮಾನ ಇಲಾಖೆ ನೀಡಿದೆ.
ಕಳೆದೊಂದು ವಾರದಿಂದ ಕರಾವಳಿಯಲ್ಲಿ ಮಳೆ ಅಬ್ಬರ ಜೋರಾಗಿದ್ದು, ಇಂದಿನಿಂದ 5 ದಿನ ಅಂದರೆ ಜುಲೈ 4 ರವರೆಗೆ ಭಾರೀ ಮಳೆ ಮುನ್ಸೂಚನೆ ಸಿಕ್ಕಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಗಾಳಿ ವೇಗ ಕೂಡ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
Advertisement
Advertisement
ಕರಾವಳಿಯ ಗಾಳಿ ಮಳೆಗೆ ಅರಬ್ಬಿ ಸಮುದ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. 130 ಕಿಲೋಮೀಟರ್ ವ್ಯಾಪ್ತಿಯ ಸಾಗರದ ಅಲ್ಲಲ್ಲಿ ಕಡಲ್ಕೊರೆತದ ಆತಂಕ ಶುರುವಾಗಿದೆ. ನಾಲ್ಕೈದು ಮೀಟರ್ ಎತ್ತರದ ಅಲೆಗಳು ತಡೆಗೋಡೆಗೆ ಬಂದು ಅಪ್ಪಳಿಸುತ್ತಿದೆ. ಶಾಶ್ವತ ಪರಿಹಾರದ ಚರ್ಚೆಯ ನಡುವೆ ರಾಜ್ಯ ಸರ್ಕಾರ ಕೇವಲ 5 ಕೋಟಿ ರೂ. ಅನುದಾನದ ಘೋಷಣೆ ಮಾಡಿದ್ದು, ಕಳೆದ ವರ್ಷದ 10 ಕೋಟಿ ರೂ. ಪರಿಹಾರ ಇನ್ನೂ ಬಿಡುಗಡೆಯಾಗಿಲ್ಲ ಎಂಬುದು ವಿಪರ್ಯಾಸ. ಸಮುದ್ರವನ್ನೇ ಅಂಗಳ ಮಾಡಿಕೊಂಡು ಜೀವನ ನಡೆಸುತ್ತಿರುವ ಕಡಲ ಮಕ್ಕಳು ಈ ಮೂರು ತಿಂಗಳು ಆತಂಕದಲ್ಲಿ ಜೀವನ ನಡೆಸುವಂತಾಗಿದೆ.