ರಾಯಚೂರು: ಪ್ರಧಾನಿ ಮೋದಿ (Narendra Modi) 2ನೇ ಹಂತದಲ್ಲಿ ಕಲ್ಯಾಣ ಕರ್ನಾಟಕದಲ್ಲಿ (Karnataka) ಭರ್ಜರಿ ಮತಬೇಟೆಗೆ ಮುಂದಾಗಿದ್ದಾರೆ. ಆದರೆ ಮೇ 2 ರಂದು ನಿಗದಿಯಾಗಿದ್ದ ರಾಯಚೂರಿನ (Raichur) ಸಿಂಧನೂರು (Sindhanur) ಕಾರ್ಯಕ್ರಮಕ್ಕೆ ಮಳೆ ಆತಂಕ ಎದುರಾಗಿದೆ. ಸಿಂಧನೂರಿನ ಹೊಸಳ್ಳಿ ಕ್ಯಾಂಪ್‌ನಲ್ಲಿ ಸಿದ್ಧಗೊಳ್ಳುತ್ತಿದ್ದ ವೇದಿಕೆ ಮಳೆ, ಬಿರುಗಾಳಿಗೆ ಕುಸಿದು ಬಿದ್ದಿದೆ.
ಸಿಂಧನೂರು ಬಿಜೆಪಿ (BJP) ಅಭ್ಯರ್ಥಿ ಕೆ ಕರಿಯಪ್ಪ ಪರ ಮತಬೇಟೆ ನಡೆಸುವ ಜೊತೆ ರಾಯಚೂರು ಕೊಪ್ಪಳ ಜಿಲ್ಲೆಯ 8 ರಿಂದ 10 ಕ್ಷೇತ್ರಗಳ ಟಾರ್ಗೆಟ್‌ನೊಂದಿಗೆ ಮೋದಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಮಳೆ ಆತಂಕದ ಹಿನ್ನೆಲೆ ವೇದಿಕೆ ಕಾರ್ಯಕ್ರಮ ರದ್ದಾದರೆ ರೋಡ್ ಶೋ (Road Show) ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ.
ಮೇ 2 ರಂದು ಮಧ್ಯಾಹ್ನ 2:30 ಕ್ಕೆ ಮೋದಿ ಕಾರ್ಯಕ್ರಮ ನಿಗದಿಯಾಗಿದೆ. ಆದರೆ ಈಗ ಮಳೆಯಿಂದಾಗಿ ಸಮಾವೇಶದ ಸ್ಥಳದಲ್ಲಿ ನೀರು ನಿಂತು ಅಸ್ತವ್ಯಸ್ತವಾಗಿದೆ. ಹೆಲಿಪ್ಯಾಡ್ ಹಾಗೂ ಕಾರ್ಯಕ್ರಮಕ್ಕೆ ಪರ್ಯಾಯ ಸ್ಥಳದ ಬಗ್ಗೆ ಚರ್ಚೆ ನಡೆದಿದೆ. ಸಿಂಧನೂರು ಹೊರವಲಯದ ಹೊಸಳ್ಳಿ ಕ್ಯಾಂಪ್ ಬಳಿ 36 ಎಕರೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿದ್ದವು. 5 ಎಕರೆ ಪ್ರದೇಶದಲ್ಲಿ ಮುಖ್ಯ ವೇದಿಕೆ, ಆಸನ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 4 ಲಕ್ಷ ಜನ ಸೇರುವ ನಿರೀಕ್ಷೆಯೊಂದಿಗೆ ಕಾರ್ಯಕ್ರಮ ತಯಾರಿ ನಡೆದಿತ್ತು. ಆದರೆ ಮಳೆ ಎಲ್ಲದಕ್ಕೂ ಅಡ್ಡಿಪಡಿಸಿದೆ. ಇದನ್ನೂ ಓದಿ: ಮೋದಿಯದ್ದು ಬರೀ ಬುರುಡೇ ಭಾಷಣ, ಸರ್ಪ ಯಾವಾಗಲೂ ಡೇಂಜರ್: ಹೆಚ್‌ಡಿಕೆ ವಾಗ್ದಾಳಿ
ಸಮಾವೇಶದ ಸ್ಥಳ ಮಳೆ, ಬಿರುಗಾಳಿಯಿಂದ ಕೆಸರುಗದ್ದೆಯಂತಾಗಿದ್ದು ಮೊರಂ ತುಂಬುವ ಕೆಲಸ ನಡೆದಿದೆ. ಸಾಧ್ಯವಾದಷ್ಟು ಸೋಮವಾರ ಸಂಜೆಯೊಳಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಯತ್ನ ನಡೆದಿದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ರದ್ದಾಗದಂತೆ ವ್ಯವಸ್ಥೆ ಮಾಡಲು ಆಯೋಜಕರು ಮುಂದಾಗಿದ್ದಾರೆ.
ಸದ್ಯ ಕಾರ್ಯಕ್ರಮದಲ್ಲಿ ಹೊಸ ಬದಲಾವಣೆಗಳು ಇಲ್ಲದ ಹಿನ್ನೆಲೆ ವೇದಿಕೆ ಸಿದ್ಧತೆ ಕಾರ್ಯ ಮುಂದುವರಿದಿದೆ. ಇಂದು ಸಹ ಮಳೆ ಸುರಿದರೆ ವೇದಿಕೆ ಕಾರ್ಯಕ್ರಮ ನಡೆಯುವುದು ಅನುಮಾನ ಎನ್ನಲಾಗಿದೆ. ಇದನ್ನೂ ಓದಿ: ಹ್ಯಾಟ್ರಿಕ್ ಗೆಲುವಿನ ಬಳಿಕ ಮತ್ತೆ ಗೆಲ್ತಾರಾ ಹೆಚ್.ಕೆ ಕುಮಾರಸ್ವಾಮಿ? – ಸಕಲೇಶಪುರ ಮೀಸಲು ಕ್ಷೇತ್ರ ಯಾರಿಗೆ ಒಲಿಯುತ್ತೆ