ಉಡುಪಿ: ಜಿಲ್ಲೆಯಲ್ಲಿ ಮೂರನೇ ದಿನ ಸುರಿದ ಮಳೆ ಭಾರೀ ಅನಾಹುತವನ್ನು ಸೃಷ್ಟಿಸಿದೆ. ಮಹಾಮಳೆಗೆ ಹಲವೆಡೆ ಮನೆಗಳು ಹಾನಿಯಾಗಿದ್ದು, ವಿದ್ಯುತ್ ಕಂಬಗಳು ಧರೆಗುರುಳಿವೆ. ತಗ್ಗು ಪ್ರದೇಶಗಳಿಗೆ ನೆರೆ ನೀರು ಆವರಿಸಿ ಜನ ಪರದಾಡುವಂತಾಗಿದೆ.
ಮೀನುಗಾರಿಕೆ ಸಂಪೂರ್ಣ ಸ್ತಬ್ಧಗೊಂಡಿದ್ದು, ಬೋಟುಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಇನ್ನು ಐತಿಹಾಸಿಕ ದುರ್ಗಾ ಪರಮೇಶ್ವರೀ ದೇಗುಲದ ಗರ್ಭಗುಡಿಗೆ ನೀರು ಬಂದಿದ್ದು, ಸಮೃದ್ಧಿಯ ಸಂಕೇತ ಎಂಬ ನೆಲೆಯಲ್ಲಿ ಈ ಭಾಗದ ಭಕ್ತಜನತೆ ಪುಳಕಗೊಂಡಿದ್ದಾರೆ.
Advertisement
ಮುಂಜಾಗೃತ ಕ್ರಮವಾಗಿ ಇವತ್ತು ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಕೇರಳದ ಮಹಾಮಳೆಯ ಪರಿಣಾಮ ಕರಾವಳಿಗೂ ತಟ್ಟಿದ್ದು, ಎಲ್ಲೆಡೆ ನೀರಿನ ಮಟ್ಟ ಏರತೊಡಗಿದೆ. ಜಿಲ್ಲೆಯ ಪಂಚನದಿಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮುನ್ಸೂಚನೆಯನ್ನು ನೀಡತೊಡಗಿವೆ.
Advertisement
Advertisement
ಮಹಾಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕುಂದಾಪುರದ ಕಮಲಶಿಲೆಯಲ್ಲಿ ಮೈದುಂಬಿ ಹರಿಯುತ್ತಿರುವ ಕುಬ್ಜಾ ನದಿಯ ನೀರು ಕಮಲಶಿಲೆಯ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ಬಂದಿದ್ದು, ಭಕ್ತರು ಪುಳಕಗೊಂಡಿದ್ದಾರೆ. ವಾಡಿಕೆಯಂತೆ ಮಹಾಮಳೆಗೆ ಈ ದೇವಸ್ಥಾನದೊಳಗೆ ನೀರು ಬಂದು ಕುಬ್ಜಾ ನದಿಯೆ ದೇವಿಗೆ ನೈಸರ್ಗಿಕ ಅಭಿಷೇಕವನ್ನು ಸಲ್ಲಿಸುತ್ತದೆ. ನಿನ್ನೆ ರಾತ್ರಿ ಭಾರೀ ಮಳೆ ಸುರಿದಿದ್ದರಿಂದ ಇಂದು ಗರ್ಭ ಗುಡಿಗೆ ನೀರು ಆವರಿಸಿದೆ. ಗರ್ಭಗುಡಿ ಜಲಾವೃತ ಆಗುತ್ತಿದ್ದಂತೆ ಅರ್ಚಕರು ದೇವಿಗೆ ಆರತಿ ಬೆಳಗಿದರು. ನೀರು ಬಂದ ಹಿನ್ನೆಲೆಯಲ್ಲಿ ಭಕ್ತರು ಪುಳಕಗೊಂಡರು.
Advertisement
ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಾರ್ಕಳ ತಾಲೂಕು ವ್ಯಾಪ್ತಿಯಲ್ಲಿ 100ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ತಡರಾತ್ರಿ ಬೀಸಿದ ಸುಂಟರಗಾಳಿಗೆ ಕಾರ್ಕಳದ ಜನತೆ ನಲುಗಿ ಹೋಗಿದ್ದಾರೆ. ಸುಂಟರಗಾಳಿಗೆ ಬಹುತೇಕ ಮನೆಗಳ ಛಾವಣಿ ಹಾರಿಹೋಗಿದ್ದು, ಕೆಲ ಮನೆಗಳ ಗೋಡೆ ಕುಸಿದಿವೆ. 50ಕ್ಕೂ ಹೆಚ್ಚು ವಿದ್ಯುತ್ ಕಂಬ ನೆಲಕ್ಕೆ ಉರುಳಿವೆ. ಮಕ್ಕುಬುಲ್ ಎಂಬವರ ಮನೆ ಮೇಲೆ ಮರಬಿದ್ದು ಮನೆ ಜಖಂ ಗೊಂಡಿದ್ದು, 18 ಲಕ್ಷ ರೂ. ನಷ್ಟವಾಗಿದೆ.
ಕುಕ್ಕುಂದೂರು ಗ್ರಾಮಪಂಚಾಯತ್ ಕಟ್ಟಡವೂ ಭಾಗಶಃ ಹಾನಿಯಾಗಿದ್ದು, ಜಯಂತಿನಗರದ ಶಾಲೆ ಕಟ್ಟಡ ಕುಸಿದಿದೆ. ಇನ್ನು ಕಾರ್ಕಳ ತಾಲೂಕು ಕಚೇರಿ ಮೇಲೆ ಮರ ಉರುಳುವ ಜೊತೆಗೆ ಸಮೀಪದಲ್ಲಿದ್ದ ಸರ್ಕಾರಿ ವಾಹನದ ಮೇಲೂ ಮರದ ಕೊಂಬೆ ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.
ಬ್ರಹ್ಮಾವರದ ಉಪ್ಪೂರು ಸ್ವರ್ಣ ನದಿ, ಸೀತಾ ನದಿ, ಸೌಪರ್ಣಿಕ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮ ನದಿತಟದ ಅಕ್ಕಪಕ್ಕದ ಮನೆಗಳಿಗೆ ನೆರೆ ನೀರು ನುಗ್ಗಿದೆ. ನಿರಂತರವಾಗಿ ಸುರಿದ ಭಾರೀ ಮಳೆಗೆ ಬ್ರಹ್ಮಾವರ ತಾಲೂಕಿನ ಬೈಕಾಡಿ, ಉಪ್ಪೂರು, ಕಲ್ಯಾಣಪುರದಲ್ಲಿ ನೆರೆ ನೀರು ಆವರಿಸಿದೆ. ಕುಂದಾಪುರ ತಾಲೂಕಿನ ಬಡಾಕೆರೆ, ನಾವುಂದ, ಬಾಗು, ಮರವಂತೆ, ಅರೆಹೊಳೆ, ಕೋಣ್ಕಿ, ನಾಡ, ಪಡುಕೋಣೆ, ಚಿಕ್ಕಳಿ, ಸೇನಾಪುರ ಗ್ರಾಮಗಳಲ್ಲಿ ನೆರೆ ನೀರು ಗದ್ದೆ, ಮನೆಗಳಿಗೆ ನುಗ್ಗಿದೆ. ನದಿ ತೀರಗಳಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದ್ದು, ದೋಣಿ ಮೂಲಕ ಸಂಚಾರ ಮಾಡುವ ಪರಿಸ್ಥಿತಿ ಎದರುರಾಗಿದೆ.
ಶಿರೂರು ಅಳ್ವೆಗದ್ದೆ ಬಂದರಿನಲ್ಲಿ ಲಂಗರು ಹಾಕಿದ 6 ದೋಣಿ ಹಾಗೂ 2 ಪರ್ಷಿಯನ್ ಬೋಟ್ ನೀರಿನಲ್ಲಿ ಕೊಚ್ಚಿ ಹೋಗಿ ಸಮುದ್ರ ಪಾಲಾಗಿದೆ. ಒಂದು ಕೋಟಿ ರೂ.ಗೂ ಅಧಿಕ ನಷ್ಟ ಸಂಭವಿಸಿದೆ. ಉಪ್ಪುಂದದ 3 ಸಾಗರ ದೀಪ ಹೆಸರಿನ ದೋಣಿ, 3 ಬಬ್ರಿಹಿಂಡ್ ಪ್ರಸಾದ ಹೆಸರಿನ ದೋಣಿ ಹಾಗೂ ಶಿರೂರಿನ ಸ್ಥಳೀಯರ 1 ಬೋಟ್, ಸೋಡಿಗದ್ದೆ ಸಮೀಪದ 1 ಬೋಟ್‍ಗೆ ಹಾನಿಯಾಗಿದೆ. ಸ್ಥಳೀಯ ಮೀನುಗಾರರು ಹಾಗೂ ಸಾರ್ವಜನಿಕರ ಹರಸಾಹಸದಿಂದ ದೋಣಿಗಳನ್ನು ಹಗ್ಗ ಕಟ್ಟಿ ರಕ್ಷಿಸಿದ್ದಾರೆ. ಆದರೆ ದೋಣಿ, ಬೋಟ್‍ನ ಎಂಜಿನ್‍ಗೆ ಸಂಪೂರ್ಣ ಹಾನಿಯಾಗಿದೆ. ತೂಫಾನಿನ ರಭಸಕ್ಕೆ ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟೊಂದು ಮುಳುಗಡೆಯಾಗಿದೆ.
ಮೀನುಗಾರರನ್ನು ರಕ್ಷಣೆ ಮಾಡಲಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಉಪ್ಪೂರು ಹೊಳೆ, ಸೌಪರ್ಣಿಕಾ ನದಿ ತುಂಬಿ ಹರಿಯುತ್ತಿದ್ದು ಈ ಭಾಗದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದು ಮೋಡಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv