ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯ ಅವಾಂತರ ಮುಂದುವರೆದಿದೆ. 2 ಪ್ರತ್ಯೇಕ ಘಟನೆಗಳಲ್ಲಿ ಸಿಡಿಲಿಗೆ ಮೂವರು ಬಲಿ ಆಗಿದ್ದಾರೆ.
ಕೊಪ್ಪಳದ ಚುಕ್ಕನಕಲ್‌ನಲ್ಲಿ ಸಿಡಿಲು ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ ತಾಂಡಾದಲ್ಲಿ ಒಬ್ಬರು ಬಲಿ ಆಗಿದ್ದಾರೆ. ಗುಡುಗು ಸಹಿತ ಭಾರೀ ಮಳೆಗೆ ಗಂಗಾವತಿ ತಾಲೂಕಿನಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ನೆಲಕಚ್ಚಿದೆ. ಕೊಪ್ಪಳದ ಕೋಳುರಿನಲ್ಲಿ ಮಳೆ ಹೊಡೆತಕ್ಕೆ ಪಪ್ಪಾಯಿ, ನುಗ್ಗೆಕಾಯಿ ಗಿಡಗಳು ನೆಲಕಚ್ಚಿವೆ. ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ಕೋಲಾರ: ಕೋಲಾರ ಜಿಲ್ಲೆಯ ಹಲವೆಡೆ ಗುಡುಗು-ಸಿಡಿಲು ಸಹಿತ ಗಾಳಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ಬೆಂಡಾಗಿದ್ದ ಜಿಲ್ಲೆಗೆ ವರುಣ ತಂಪೆರೆದಿದ್ದಾರೆ. ವಾರದ ಹಿಂದೆಯಷ್ಟೆ ಕೊಂಚ ಮಳೆಯಾಗಿತ್ತು. ಈಗ ವಾರದ ನಂತರ ಮತ್ತೆ ಮಳೆಯಾಗಿದೆ. ತೊಟ್ಲಿ ಗ್ರಾಮದಲ್ಲಿ ಸುಮಾರು ಅರ್ಧ ಗಂಟೆ ಮಳೆ ಸುರಿಯಿತು. ಮಳೆಯಿಂದ ಜನಜೀವನ ಅಸ್ತವ್ಯಸ್ತವಾಯಿತು.
ಧಾರವಾಡ: ಜಿಲ್ಲೆಯ ಹಲವೆಡೆ ಭಾರೀ ಮಳೆಯಾಗಿದೆ. ಗುಡುಗು ಸಹಿತ ಆಲಿಕಲ್ ಮಳೆಯಾಗಿದೆ. ಧಾರವಾಡ ಸಿಬಿಟಿ ಬಸ್ ನಿಲ್ದಾಣದಲ್ಲಿ ಸೇಬು, ಕಲ್ಲಂಗಡಿ ಹಣ್ಣುಗಳು ತೇಲಿಹೋದ ದೃಶ್ಯ ಕಂಡುಬಂತು. ಹೊಯ್ಸಳ ನಗರದಲ್ಲಿ ಹನುಮನ ದೇವಸ್ಥಾನದ ಮೇಲೆ ಮರ ಬಿದ್ದಿತು. ದೇವಸ್ಥಾನದ ಪಕ್ಕದಲ್ಲಿದ್ದ ಆಟೋ ಕೂಡ ಜಖಂ ಆಯಿತು.
ಚಿತ್ರದುರ್ಗ: ಹಿರಿಯೂರು ನಗರದಲ್ಲಿ ಆಲಿಕಲ್ಲು ಸಹಿತ ಜೋರು ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಕಾದಿದ್ದ ಭೂಮಿಗೆ ಮಳೆ ತಂಪೆರೆದಿದೆ. ಆಲಿಕಲ್ಲು ಮಳೆ ದುರ್ಗದ ಜನರಿಗೆ ಖುಷಿ ಜೊತೆ ಅಚ್ಚರಿ ಮೂಡಿಸಿದೆ.
ಮಂಗಳೂರು: ನಗರದಲ್ಲಿ ಬೆಳ್ಳಂಬೆಳಗ್ಗೆ ವರುಣಾರ್ಭಟ ಕಂಡುಬಂತು. ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಅಕಾಲಿಕ ಮಳೆಯಿಂದಾಗಿ ಸಾರ್ವಜನಿಕರು ಹೈರಾಣಾದರು.