ಚಿಕ್ಕಬಳ್ಳಾಪುರ: ಮಳೆಯಿಂದ ರಕ್ಷಣೆ ಪಡೆಯಲು ಶೆಡ್ ಅಡಿಯಲ್ಲಿ ಆಶ್ರಯ ಪಡೆದಿದ್ದವರ ಮೇಲೆ ಗೋಡೆ ಕುಸಿದ ಪರಿಣಾಮ ಅಜ್ಜಿ ಮತ್ತು ಮೊಮ್ಮಗ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಹೊಸಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಹೊಸಹಳ್ಳಿ ನಿವಾಸಿ ಭಾಗ್ಯಮ್ಮ (48) ಬಾಲಕ ವೆಂಕಿ (8) ಸಾವನ್ನಪ್ಪಿದ ದುರ್ದೈವಿಗಳಾಗಿದ್ದು, ಗ್ರಾಮದ ವಿಜಯಕುಮಾರ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಘಟನೆ ನಡೆದಿದೆ. ಇಂದು ಸಂಜೆ ವೇಳೆಗೆ ಗಾಳಿಯ ರಭಸದೊಂದಿಗೆ ಮಳೆ ಶುರುವಾದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.
Advertisement
Advertisement
ಏಕಾಏಕಿ ಮಳೆ ಆರಂಭವಾದ ಪರಿಣಾಮ ಮಳೆಯಿಂದ ರಕ್ಷಣೆ ಪಡೆಯಲು ಶೆಡ್ ಕೆಳಗೆ ಆಶ್ರಯ ಪಡೆದಿದ್ದಾರೆ. ಈ ವೇಳೆ ಹಾಲೋ ಬ್ರಿಕ್ಸ್ ನಿಂದ ನಿರ್ಮಿಸಿದ ಗೋಡೆ ಕುಸಿದಿದೆ. ಪರಿಣಾಮ ಗೋಡೆಯ ಅಡಿಯಲ್ಲಿ ಸಿಲುಕಿದ ಭಾಗ್ಯಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಮೊಮ್ಮಗ ವೆಂಕಿ ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದಾರೆ.
Advertisement
ಮತ್ತೊಂದು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮನಿರತ್ನಮ್ಮ (38) ಮತ್ತು ಶ್ರೀನಿವಾಸ್ (25) ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಶೆಡ್ ಗೆ ನಿರ್ಮಿಸಿದ ಗೋಡೆಗೆ ತಳಪಾಯ ಇಲ್ಲದೆ ಇದ್ದದ್ದು ಗೋಡೆ ಕುಸಿಯಲು ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ಶಾಸಕ ಟಿ. ವೆಂಕಟರಮಣಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದ್ದಾರೆ.