ಯಾದಗಿರಿ: ಬಿರುಗಾಳಿ ಸಹಿತ ಮಳೆ ವೇಳೆ ಸಿಡಿಲು ಬಡಿದು ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ನಡೆದಿದೆ.
ಸುರಪುರ ತಾಲೂಕಿನ ಪೀರಗಾರದೊಡ್ಡಿ ಗ್ರಾಮದ 12 ವರ್ಷದ ಮೌನೇಶ್ ಸಿಡಿಲು ಬಡಿದ ಸಾವನ್ನಪ್ಪಿದ ಬಾಲಕ. ಗ್ರಾಮ ಹೊರ ವಲಯದಲ್ಲಿ ದನ ಮೇಯಿಸುತ್ತಿದ್ದ ಸಮಯದಲ್ಲಿ ಮಳೆ ಬಂದ ಕಾರಣ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದ ವೇಳೆ ಸಿಡಿಲು ತಾಗಿದೆ.
Advertisement
Advertisement
ಮತ್ತೊಂದು ಘಟನೆಯಲ್ಲಿ ಯಾದಗಿರಿ ತಾಲೂಕಿನ ಮೈಲಾಪೂರ ಗ್ರಾಮದ ಕುಮಾರ್ (30) ಎಂಬ ಯುವಕ ಮೃತ ಪಟ್ಟಿದ್ದಾರೆ. ದೇವಾಲಯಕ್ಕೆ ತೆರಳಿ ಗ್ರಾಮಕ್ಕೆ ಹಿಂದಿರುಗುತ್ತಿದ್ದ 5 ಜನರು ಮರದ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ಸಿಡಿಲು ಬಿಡಿದು ಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡ ನಾಲ್ವರನ್ನು ಜಿಲ್ಲಾ ಆಸ್ಪತ್ರೆ ದಾಖಲಿಸಲಾಗಿದೆ. ಅಲ್ಲದೇ ಜಿಲ್ಲೆಯ ರಾಮಸಮುದ್ರ ಬಳಿ ಸಿಡಿಲಿಗೆ ಚಂದ್ರಪ್ಪ, ಸಿದ್ದರಾಮಪ್ಪ ಎಂಬವರಿಗೆ ಸೇರಿದ 12 ಮೇಕೆಗಳು ಸಾವನ್ನಪ್ಪಿವೆ. ಯಾದಗಿರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕು ಸಾಲಗುಂದ ಬಳಿ ಸಿಡಿಲು ಬಡಿದು ಒಬ್ಬ ಯುವಕ ಹಾಗೂ ನಾಲ್ಕು ಮೇಕೆಗಳು ಸಾವನ್ನಪ್ಪಿವೆ. ಸಾಲಗುಂದ ಗ್ರಾಮದ 34 ವರ್ಷದ ಮಹಿಬೂಬ ರಾಜಾ ನಾಯ್ಕ್ ಮೃತ ದುರ್ದೈವಿ. ಮೇಕೆ ಕಾಯಲು ಹೊಲಕ್ಕೆ ತೆರಳಿದ ಸಂದರ್ಭದಲ್ಲಿ ಸಿಡಿದು ಬಡಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಜೊತೆಗಿದ್ದ ನಾಲ್ಕು ಮೇಕೆಗಳು ಸಾವಿಗೀಡಾಗಿವೆ. ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಸಿಂಧನೂರು ನಗರದಲ್ಲೂ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಗ್ರಾಮೀಣ ಭಾಗದಲ್ಲಿ ಭತ್ತ ಸೇರಿ ವಿವಿಧ ಬೆಳೆ ಹಾನಿಯಾಗಿವೆ.