ಮಂಗಳೂರು/ಹಾಸನ/ಶಿವಮೊಗ್ಗ: ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಶನಿವಾರವೂ ಗಾಳಿ, ಸಿಡಿಲು ಸಹಿತ ಭಾರೀ ಮಳೆಯಾಗಿದೆ.
ಸಂಜೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಮಳೆರಾಯನ ಆರ್ಭಟಕ್ಕೆ ಗ್ರಾಮೀಣ ಭಾಗಗಳಾದ ಕಡಬ, ನೆಲ್ಯಾಡಿ, ಸುಳ್ಯ, ಪಂಜ ಕಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿವೆ. ಇದನ್ನೂ ಓದಿ: ಮಧೂರು ಮಹಾಗಣಪತಿಗೆ 33 ವರ್ಷಗಳ ಬಳಿಕ ಇಂದು ಮೂಡಪ್ಪ ಸೇವೆ
ಉಡುಪಿ(Udupi) ಜಿಲ್ಲೆಯಲ್ಲಿ ಏಕಾಏಕಿ ಮೋಡ ಮುಸುಕಿದ ವಾತಾವರಣದಿಂದ ದಿಢೀರ್ ಮಳೆಯಾಗಿದ್ದು, ಸುಮಾರು ಅರ್ಧಗಂಟೆಗಳ ಕಾಲ ಗಾಳಿ ಮಳೆಯಾಗಿದೆ. ವಿಪರೀತ ಉಷ್ಣಾಂಶದಿಂದ ಕಂಗೆಟ್ಟು ಹೋಗಿದ್ದ ಉಡುಪಿ ಜನರಲ್ಲಿ ಕೆಲಕಾಲ ಸುರಿದ ವರ್ಷಧಾರೆಯಿಂದ ಮಂದಹಾಸ ಮೂಡಿದೆ. ಕಾರ್ಕಳ, ಉಡುಪಿ, ಕಾಪು ಕುಂದಾಪುರದಾದ್ಯಂತ ಗುಡುಗು ಸಹಿತ ಮಳೆಯಾಗಿದೆ.
ಶಿವಮೊಗ್ಗ, ಹಾಸನದಲ್ಲಿ ಗುಡುಗು ಸಹಿತ ಮಳೆ
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲೂ(Shivamogga) ಅರ್ಧಗಂಟೆಗಳ ಕಾಲ ಮಳೆಯಾಗಿದೆ. ಬಿಸಿಲ ಝಳಕ್ಕೆ ಹೈರಾಣಾಗಿದ್ದ ಮಲೆನಾಡಿಗರಿಗೆ ಮಳೆರಾಯ ತಂಪೆರೆದಿದ್ದಾನೆ. ಶಿಕಾರಿಪುರ, ಹೊಸನಗರ, ತೀರ್ಥಹಳ್ಳಿ, ಸೊರಬ ವರ್ಷಧಾರೆಯಾಗಿದೆ. ಇನ್ನೂ ಸಕಲೇಶಪುರ, ಆಲೂರು, ಹಾಸನ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಮಿಂಚು, ಗುಡುಗು, ಸಿಡಿಲು ಸಹಿತ ಭಾರೀ ಮಳೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರ ಪರದಾಡಿದರು. ಇದನ್ನೂ ಓದಿ: ಹಾಲಿನ ಪ್ರೋತ್ಸಾಹ ಧನ ಬಿಡುಗಡೆಗೆ ಮಾಡಿ: ಸರ್ಕಾರಕ್ಕೆ ನಿಖಿಲ್ ಕುಮಾರಸ್ವಾಮಿ ಆಗ್ರಹ
ಗದಗದಲ್ಲಿ ಧಾರಾಕಾರ ಮಳೆ
ಗದಗ(Gadag) ಜಿಲ್ಲೆಯ ಹಲವೆಡೆ ಗುಡುಗು, ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬಿರುಬಿಸಿಲಿನಿಂದ ಕೂಡಿದ್ದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಏಕಾಏಕಿ ಮೋಡ ಕವಿದ ವಾತಾವರಣ ಉಂಟಾಗಿ, ನಂತರ ಸುಮಾರು ಒಂದು ಗಂಟೆ ಮಳೆ ಸುರಿದಿದೆ. ಮಳೆಯಿಂದ ಪಾದಚಾರಿಗಳು, ವಾಹನ ಸವಾರರು ಪರದಾಡಿದರು. ಬೀದಿ ಬದಿಯ ಹೂವು-ಹಣ್ಣಿನ ವ್ಯಾಪಾರಸ್ಥರು, ಸಾರ್ವಜನಿಕರು ಕೆಲಕಾಲ ಪರದಾಡಿದರು. ಕಳೆದ ಕೆಲವು ದಿನಗಳಿಂದ ಬಿಸಿಲಿನ ಬೇಗೆಯೂ ಏರತೊಡಗಿತ್ತು. ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನವೂ ದಾಖಲಾಗಿತ್ತು. ಇದರಿಂದ ಸಾರ್ವಜನಿಕರು ಕಂಗಾಲಾಗುವಂತೆ ಮಾಡಿತ್ತು. ವರುಣನ ಆಗಮನದಿಂದ ಬಿಸಿಲಿನಿಂದ ಬಸವಳಿದಿದ್ದ ಜನರಿಗೆ ತುಸು ಆಹ್ಲಾದಕರ ಅನುಭವ ನೀಡಿತು. ಇನ್ನೂ ನರಗುಂದ, ಶಿರಹಟ್ಟಿ, ಮುಂಡರಗಿ ಹಾಗೂ ಡಂಬಳ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಗಿದೆ. ಗುಡುಗು, ಸಿಡಿಲು, ಬಿರುಗಾಳಿ ಜೊತೆಗೆ ಮಳೆ ಸುರಿದಿದೆ. ಇದನ್ನೂ ಓದಿ: ಕನ್ನಡಿಗನ ಆರ್ಭಟಕ್ಕೆ ಚೆನ್ನೈ ಚಿಂದಿ, ರಾಹುಲ್ ಅಮೋಘ ಅರ್ಧಶತಕ – ಡೆಲ್ಲಿ ಕ್ಯಾಪಿಟಲ್ಸ್‌ಗೆ ಹ್ಯಾಟ್ರಿಕ್ ಗೆಲುವು
ಕಾಫಿನಾಡು ಮಲೆನಾಡು ಭಾಗದಲ್ಲಿ ಭಾರೀ ಮಳೆ, ಕಳೆದೊಂದು ಗಂಟೆಯಿಂದ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ವರುಣರಾಯ ಆರ್ಭಟಿಸಿದ್ದಾನೆ. ಮಳೆ ಕಂಡು ಕಾಫಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.