ರಾಮನಗರ: ಒಂದೆಡೆ ಬೇಸಿಗೆಯ ಬಿಸಿಲಿನ ತಾಪದಿಂದ ಕಾದಿದ್ದ ಬಂಡೆಗಳ ಶಾಕ ಹೊರಬಿದ್ದು ಸೆಕೆಯಿಂದ ಬಳಲಿದ್ದ ರೇಷ್ಮೆನಗರಿ ರಾಮನಗರದ ಜನತೆಗೆ ಶನಿವಾರ ಮಧ್ಯರಾತ್ರಿ ಮಳೆರಾಯ ತಂಪನ್ನೆರೆದಿದ್ದಾನೆ.
ಹೌದು. ಮಳೆಗಾಲ ಆರಂಭಕ್ಕೂ ಮುನ್ನವೇ ಬೇಸಿಗೆಯ ಬಿಸಿಲಿನಿಂದ ಬೆಂದು ಹೋಗಿದ್ದ ರಾಮನಗರ ಜನತೆಗೆ ಮಧ್ಯರಾತ್ರಿ ಸುಮಾರು 1 ಗಂಟೆಗೆ ಮಳೆರಾಯ ತಂಪನ್ನೆರೆದಿದ್ದಾನೆ.
ಸಪ್ತಗಿರಿಗಳ ನಗರ ಅಂತಲೇ ಕರೆಸಿಕೊಳ್ಳುವ ರಾಮನಗರಕ್ಕೆ ರಾತ್ರಿಯಾದ್ರೆ ಸಾಕು ಹಗಲಿನ ಬಿಸಿಲಿನ ತಾಪಕ್ಕಿಂತ ರಾತ್ರಿಯ ಸೆಕೆಯ ತಾಪವೇ ಹೆಚ್ಚು. ಬೆಳಗ್ಗಿನಿಂದ ಕಾದು ಕಾದು ಕೆಂಡದಂತಾಗಿರುವ ಬಂಡೆಗಲ್ಲುಗಳು ರಾತ್ರಿ ವೇಳೆ ತಾಪವನ್ನ ಹೊರ ಸೂಸುತ್ತಿವೆ. ಇದ್ರಿಂದ ಹಗಲಿನ ಸೆಕೆಗಿಂತ ರಾತ್ರಿಯ ಸೆಕೆಯೇ ಹೆಚ್ಚಾಗಿದೆ.
ಅಂದಹಾಗೇ ಮಧ್ಯರಾತ್ರಿ ಸುರಿದ 10 ನಿಮಿಷಗಳಿಗೂ ಹೆಚ್ಚಿನ ಕಾಲದ ಮಳೆಯಿಂದಾಗಿ ಮಧ್ಯರಾತ್ರಿ ವೇಳೆಯಲ್ಲಿಯೂ ಜನ ನಿದ್ದೆಯಿಂದ ಎದ್ದು ಹೊರಬಂದು ತುಂತುರು ಮಳೆಗೆ ಸಂತೋಷವನ್ನ ವ್ಯಕ್ತಪಡಿಸ್ತಾ ಓಡಾಡ್ತಾ ಇದ್ರು.
ಸತತ ನಾಲ್ಕು ವರ್ಷಗಳ ಕಾಲ ಭೀಕರ ಬರಗಾಲ ಎದುರಿಸಿರುವ ರಾಮನಗರದ ಜನತೆ ಇದೀಗ ಐದನೇ ವರ್ಷವೂ ಸಹ ಬರಗಾಲಕ್ಕೆ ತುತ್ತಾಗಿದ್ದಾರೆ. ಇದೀಗ ಮಧ್ಯರಾತ್ರಿ ಸ್ವಲ್ಪ ಮಟ್ಟಿಗೆ ತಂಪನ್ನೆರೆದಿರುವ ಮಳೆರಾಯನ ಕೃಪೆ ಈ ಬಾರಿಯಾದ್ರೂ ಜಿಲ್ಲೆಯ ಜನರ ಮೇಲೆ ಬೀಳಲಿ. ಸತತ ಬರಗಾಲದ ಭೀಕರತೆಯನ್ನ ಹೋಗಲಾಡಿಸಲಿ ಎಂದು ಪ್ರಾರ್ಥನೆ ಸಲ್ಲಿಸ್ತಿದ್ದಾರೆ.