ಬೆಂಗಳೂರು: ಉತ್ತರ ಕನ್ನಡ (Uttara Kannada) ಜಿಲ್ಲೆ ಮೇಲೆ ಪ್ರಕೃತಿ ಮುನಿಸಿಕೊಂಡಂತಿದೆ. ಶಿರೂರು ಭೂಕುಸಿತ ದುರಂತ ಇಡೀ ಕರಾವಳಿಯನ್ನ ಆತಂಕದ ಕಡಲಲ್ಲಿ ಮುಳುಗಿಸಿದೆ. ಶಿರೂರು ಭೂಕುಸಿತದಿಂದ ಹಲವು ದುರಂತಗಳು ಸಂಭವಿಸಿವೆ. 200 ಮೀಟರ್‌ನಷ್ಟು ಗಾತ್ರದ ಗುಡ್ಡ ಕುಸಿದ ಧಾಟಿಗೆ ಗಂಗಾವಳಿ ನದಿಯಲ್ಲಿ ಮಿನಿ ಸುನಾಮಿ ಸೃಷ್ಟಿಯಾಗಿ ನದಿ ತಟದ ಉಳುವರೆ ಗ್ರಾಮದ ನಾಲ್ಕು ಮನೆ ನೆಲಸಮವಾಗಿವೆ.
10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಸೀಥಿಗೌಡ ಎಂಬ ಮಹಿಳೆ ಗಂಗಾವಳಿ ಪಾಲಾಗಿದ್ದು, 14 ಮಂದಿ ಗಾಯಗೊಂಡಿದ್ದಾರೆ. ಇನ್ನು, ನದಿಗೆ ಬಿದ್ದ ಹೆಚ್‌ಪಿ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗ್ತಿತ್ತು. ಕೂಡಲೇ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಟ್ಯಾಂಕರ್ ವಾಲ್ ಬಂದ್ ಮಾಡಿದ್ದಾರೆ. ನದಿ ತಟದ 35 ಕುಟುಂಬಗಳಿಗೆ ನದಿ ನೀರು ಬಳಸದಂತೆ ಎಚ್ಚರಿಕೆ ನೀಡಲಾಗಿದೆ.
Advertisement
Advertisement
ಇನ್ನೂ ಶಿರೂರು ಬಳಿ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ. 90 ಮೀಟರ್ ಗುಡ್ಡ ಬಿರುಕುಬಿಟ್ಟಿದೆ. ಬಿರುಕಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಸಂಜೆ ಸಣ್ಣಪ್ರಮಾಣದಲ್ಲಿ ಮಣ್ಣು ಕುಸಿದಿದೆ. ಹೀಗಾಗಿ ರಕ್ಷಣಾ ಕಾರ್ಯಚರಣೆ ಸ್ಥಗಿತಗೊಂಡಿದ್ದು, ಗುರುವಾರ ಮತ್ತೆ ಮುಂದುವರಿಯಲಿದೆ. ಈ ಭಾಗದ ಜನರನ್ನು ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿಸಲಾಗಿದೆ. ಒಟ್ಟು ಏಳು ಮಂದಿ ಬಲಿ ಆಗಿದ್ದು, ಇನ್ನೂ ಮೂವರ ಶವಗಳು ಪತ್ತೆಯಾಗಬೇಕಿದೆ. ಮಣ್ಣಿನಡಿ ಕಾರೊಂದು ಹೂತುಹೋಗಿರೋದನ್ನು ಜಿಪಿಎಸ್ ಮೂಲಕ ಪತ್ತೆ ಹಚ್ಚಲಾಗಿದೆ. ಹೀಗಾಗಿ ಸಾವು ನೋವು ಇನ್ನಷ್ಟು ಹೆಚ್ಚುವ ಸಂಭವ ಇದೆ. ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಸಂಬಂಧ ಕೇಂದ್ರಕ್ಕೆ ದೂರು ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Advertisement
Advertisement
ಕರಾವಳಿ ತತ್ತರ:
ಭಾರೀ ಮಳೆಗೆ ಕರಾವಳಿ ಜಿಲ್ಲೆಗಳು ತತ್ತರಿಸಿವೆ. ಉಡುಪಿ ಜಿಲ್ಲೆಯಲ್ಲಿ ದಾಖಲೆಯ 148 ಮಿಮೀ ಮಳೆಯಾಗಿದೆ. ಹೆಬ್ರಿಯಲ್ಲಿ ಅತ್ಯಧಿಕ ಅಂದ್ರೆ 203 ಮಿ.ಮೀ, ಕುಂದಾಪುರ 186, ಬ್ರಹ್ಮಾವರ 164, ಬೈಂದೂರು 151 ಮಿಲಿಮೀಟರ್ ಮಳೆಯಾಗಿದೆ. ಸ್ವರ್ಣಾ, ಸೀತಾ ನದಿಗಳ ರೌದ್ರನರ್ತನಕ್ಕೆ ಬೈಂದೂರಿನ ಹಲವು ಗ್ರಾಮಗಳು ಜಲಾವೃತವಾಗಿವೆ. ಗದ್ದೆ, ರಸ್ತೆಯಲ್ಲಿ ಜನ ದೋಣಿಯಲ್ಲಿ ಸಂಚರಿಸುವಂತಾಗಿದೆ. ನೀಲಾವರದ ನಾಗದೇವರ ಗುಡಿ ಜಲಾವೃತವಾಗಿದೆ. ಬ್ರಹ್ಮಾವರದ ಅಚ್ಲಾಡಿಯಲ್ಲಿ ಅನಾರೋಗ್ಯದಿಂದ ಬಳಲ್ತಿದ್ದ ವೃದ್ಧೆಯನ್ನು ದೋಣಿ ನೆರವಿಂದ ಆಸ್ಪತ್ರೆಗೆ ಸಾಗಿಸಲಾಗಿದೆ. ಮಡಿಸಾಲು ಹೊಳೆ ಉಕ್ಕಿ ಹರಿದ ಪರಿಣಾಮ ನೂರಾರು ಎಕರೆ ಕೃಷಿ ಭೂಮಿ ಮುಳುಗಿದೆ. ಕಾಪು ತಾಲೂಕಿನ ಕುರ್ಕಾಲು ಕಿಂಡಿ ಅಣೆಕಟ್ಟಿಗೆ ನಾಡದೋಣಿಯೊಂದು ಸಿಲುಕಿದ್ದು, ನೀರಿನ ಹರಿವಿಗೆ ತಡೆಯಾಗಿದೆ. ದಕ್ಷಿಣ ಕನ್ನಡದ ನದಿಗಳು ಉಕ್ಕೇರಿವೆ. ಮಂಗಳೂರು ಹೊರವಲಯದ ಅಡ್ಯಾರ್ – ಪಾವೂರು ಬಳಿಯ ತಗ್ಗುಪ್ರದೇಶದ ಕೃಷಿಭೂಮಿಗೆ ನೀರು ನುಗ್ಗಿದೆ. ನೇತ್ರಾವತಿ ನದಿಗೆ ಪಾವೂರು ಬಳಿ ಅಡ್ಡಲಾಗಿ ಕಟ್ಟಿರುವ ಡ್ಯಾಂ ಭರ್ತಿಯಾಗಿದ್ದು, ಎಲ್ಲಾ 36 ಗೇಟ್‌ಗಳಿಂದ ನೀರನ್ನು ಸಮುದ್ರಕ್ಕೆ ಹೊರಬಿಡಲಾಗ್ತಿದೆ. ನದಿ ಪಾತ್ರದ ಜನರಿಗೂ ಎಚ್ಚರಿಕೆ ನೀಡಲಾಗಿದೆ.
ಹಾಸನದಲ್ಲೂ ಭೂಕುಸಿತ:
ಅಲ್ಲದೇ ಮಲೆನಾಡು ಭಾಗದಲ್ಲೂ ಉತ್ತಮ ಮಳೆ ಆಗ್ತಿದೆ. ಆಗುಂಬೆಯಲ್ಲಿ 210, ಭಾಗಮಂಡಲದಲ್ಲಿ 150, ಶೃಂಗೇರಿ, ಕೊಟ್ಟಿಗೆಹಾರ, ಕಮ್ಮರಡಿಯಲ್ಲಿ 140 ಮಿಲಿಮೀಟರ್ ಮಳೆಯಾಗಿದೆ. ಸಕಲೇಶಪುರದ ದೊಡ್ಡತಪ್ಪಲು ಬಳಿ ರಸ್ತೆ ಮೇಲೆ ಗುಡ್ಡ ಕುಸಿದಿದೆ. ಕೊಲ್ಲಹಳ್ಳಿ ಬಳಿ ಹೈವೇಯಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. 500 ಮೀಟರ್ ಉದ್ದಕ್ಕೂ ಕುಸಿತವಾಗ್ತಿದೆ. ಸೂಕ್ತ ತಡೆಗೋಡೆ ನಿರ್ಮಿಸದ ಕಾರಣ ಮಣ್ಣು ಕೊಚ್ಚಿ ಹೋಗ್ತಿದೆ. ಹೇಮಾವತಿ ನದಿ ಉಕ್ಕಿಹರಿದ ಪರಿಣಾಮ ಹೊಳೆಮಲ್ಲೇಶ್ವರ ದೇಗುಲದ ಮೆಟ್ಟಿಲು ಜಲಾವೃವಾಗಿವೆ. ಜಂಬರಡಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಕೊಡಗಿನ ಕರ್ತೋಜಿ ಮುಖ್ಯರಸ್ತೆ ಬಿರುಕುಬಿಟ್ಟಿದ್ದು, ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಮುಂದಾಗಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟದಲ್ಲಿ 2 ಮನೆಗಳ ಮೇಲೆ ಗುಡ್ಡ ಕುಸಿದಿದೆ. ಭದ್ರಾನದಿ ಅಪಾಯದ ಮಟ್ಟ ಮೀರಿದ್ದು, ಕಳಸ ಸಮೀಪದ ಹೆಬ್ಬಾಳೆ ಸೇತುವೆ ಮೇಲೆ ಸಂಚಾರ ನಿರ್ಬಂಧಿಸಲಾಗಿದೆ. ಶೃಂಗೇರಿ ಜಲಾವೃತವಾಗಿದ್ದು, ತುಂಗೆ ಶಾಂತಿಸಲೆಂದು ಶೃಂಗೇರಿಮಠದ ಕಿರಿಯ ಶ್ರೀಗಳು ಪೂಜೆ ಸಲ್ಲಿಸಿದ್ದಾರೆ. ಶಿವಮೊಗ್ಗ, ಚಿಕ್ಕಮಗಳೂರಿನ ಪ್ರವಾಸಿತಾಣಗಳಿಗೆ ಸದ್ಯಕ್ಕೆ ಯಾರು ಬರಬೇಡಿ ಎಂದು ಡಿಸಿ ಮನವಿ ಮಾಡಿದ್ದಾರೆ.
ದಕ್ಷಿಣ ಒಳನಾಡಿಗೂ ಜಲದಿಗ್ಭಂದನ:
ರಣಮಳೆಯ ಆರ್ಭಟದಿಂದಾಗಿ ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಹಲವೆಡೆ ಮಳೆ ಅಬ್ಬರವಿದೆ. ಕಾವೇರಿಕೊಳ್ಳದ ಜಲಾಶಯಗಳಿಗೆ ನೀರಿನ ಒಳಹರಿವು-ಹೊರಹರಿವು ಹೆಚ್ಚಿದೆ. 24 ಗಂಟೆಯಲ್ಲಿ ಕೆಆರ್‌ಎಸ್‌ಗೆ 3 ಟಿಎಂಸಿ ನೀರು ಸೇರಿದೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಜಲಾಶಯದಿಂದ ಅಧಿಕ ನೀರು ಬಿಟ್ಟಿರುವ ಕಾರಣ ನಂಜನಗೂಡಿನ ಹಳ್ಳದಕೇರಿಗೆ ನೀರು ನುಗ್ಗಿದ್ದು, ಬಡಾವಣೆ ಮುಳುಗಡೆ ಭೀತಿ ಎದುರಿಸ್ತಿದೆ. ಕಪಿಲಾ ನದಿ ತೀರದಲ್ಲೂ ಪ್ರವಾಹ ಭೀತಿ ಎದುರಾಗಿದೆ. ಬಿದಿರಹಳ್ಳಿ ಸೇತುವೆ ಮುಳುಗಡೆಯಾಗಿದೆ. ಸರಗೂರು ತಾಲೂಕಿನ ಹಲವು ಗ್ರಾಮಗಳ ಸಂಪರ್ಕಕ್ಕೆ ತೊಂದರೆಯಾಗಿದೆ.