1500 ರೂ. ಆಸೆಗಾಗಿ ಶವವನ್ನ ನದಿಗೆಸೆದ ರೈಲ್ವೆ ಪೊಲೀಸ್- ವಿಡಿಯೋ ವೈರಲ್

Public TV
1 Min Read
railway police bihar

ಪಾಟ್ನಾ: 1500 ರೂ. ಆಸೆಗಾಗಿ ರೈಲ್ವೇ ಪೊಲೀಸರೊಬ್ಬರು ಶವವನ್ನು ನಾಚಿಕೆಯಿಲ್ಲದೆ ನದಿಗೆ ಎಸೆದ ಘಟನೆ ಬಿಹಾರದಲ್ಲಿ ನಡೆದಿದೆ.

ರೈಲ್ವೆ ಪೊಲೀಸ್ ಅಧಿಕಾರಿ ಹಾಗು ಮತ್ತೊಬ್ಬ ವ್ಯಕ್ತಿ ಶವವನ್ನು ನದಿಗೆ ಎಸೆಯುವ ವೇಳೆ ಪ್ರತ್ಯಕ್ಷದರ್ಶಿಗಳು ಇದನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ದರ್ಭಂಗಾ ರೈಲ್ವೆ ನಿಲ್ದಾಣದ ಬಳಿ ಸರ್ಕಾರಿ ರೈಲ್ವೆ ಪೊಲೀಸರಿಗೆ(ಜಿಆರ್‍ಪಿ) ಗುರುವಾರದಂದ ಅಪರಿಚಿತ ಶವವೊಂದು ಪತ್ತೆಯಾದ ಬಳಿಕ ಈ ಘಟನೆ ನಡೆದಿದೆ.

railway police 2

ನಿಯಮಗಳ ಪ್ರಕಾರ ಅಪರಿಚಿತ ಶವ ಪತ್ತೆಯಾದಾಗ ಭಾರತೀಯ ರೈಲ್ವೇ ಶವ ಸಂಸ್ಕಾರಕ್ಕಾಗಿ 1500 ರೂ. ನೀಡುತ್ತದೆ. ಈ 1500 ರೂ. ಹಣವನ್ನ ಜೇಬಿಗಿಳಿಸಿಕೊಳ್ಳಬಹುದು ಎಂಬ ಆಸೆಯಿಂದ ಜಿಆರ್‍ಪಿ ಅಧಿಕಾರಿ ಅವ್ದೇಶ್ ಮಿಶ್ರಾ ಹಾಗೂ ಶವವನ್ನು ಇರಿಸಲಾಗಿದ್ದ ಆಂಬುಲೆನ್ಸ್‍ನ ಚಾಲಕ ದರ್ಭಂಗಾ- ಸಮಸ್ತಿಪುರ್ ರಸ್ತೆಯಲ್ಲಿನ ಬಾಗ್ಮತಿ ನದಿಗೆ ಶವವನ್ನು ಎಸೆಯಲು ನಿರ್ಧರಿಸಿದ್ದರು.

railway police 1

ಶವವನ್ನು ಎಸೆಯುವ ವೇಳೆ ಸ್ಥಳದಲ್ಲಿದ್ದವರು ಈ ದೃಶ್ಯವನ್ನ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಸ್ಥಳದಲ್ಲಿದ್ದವರು ಅವ್ದೇಶ್ ಹಾಗೂ ಆಂಬುಲೆನ್ಸ್ ಚಾಲಕನಿಗೆ ಏನು ಮಾಡ್ತೀದ್ದೀರ ಅಂತ ವಿಚಾರಿಸಿದ್ದರು. ಆಗ ಅವ್ದೇಶ್, ಶವ ಕೊಳೆತುಹೋಗಿದ್ದರಿಂದ ನದಿಗೆ ಎಸೆಯುತ್ತಿದ್ದೇವೆ ಎಂದು ಹೇಳಿದ್ದರು.

railway police

ಈ ದೃಶ್ಯವನ್ನ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದ ವ್ಯಕ್ತಿ ಇದನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ನಂತರ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಇಲಾಖೆಯ ವಿರುದ್ಧ ಕೋಪದಿಂದ ಕಮೆಂಟ್‍ಗಳನ್ನ ಮಾಡಿದ್ದಾರೆ. ವಿಡಿಯೋ ವೈರಲ್ ಆದ ನಂತರ ಎಸ್‍ಪಿ ಗೆ ಈ ಬಗ್ಗೆ ಮಾಹಿತಿ ತಿಳಿದು ತನಿಖೆಗೆ ಆದೇಶಿಸಿದ್ದರು. ರೈಲ್ವೆ ಪೊಲೀಸ್‍ನ ಈ ನಾಚಿಕೆಗೇಡಿನ ಕೃತ್ಯ ನಿಜವೆಂದು ಸಾಬೀತಾಗಿದೆ. ಕೂಡಲೇ ಇಲಾಖೆ ಕ್ರಮ ಕೈಗೊಂಡಿದ್ದು, ಅವ್ದೇಶ್‍ರನ್ನ ಅಮಾನತು ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *