ಒಂದು ವೇಳೆ ಕವಚ್‌ ಅಳವಡಿಸಿದ್ದರೂ ಈ ದುರಂತವನ್ನು ತಪ್ಪಿಸಲು ಆಗುತ್ತಿರಲಿಲ್ಲ- ಅಪಘಾತಕ್ಕೆ ಕಾರಣ ತಿಳಿಸಿದ ರೈಲ್ವೇ

Public TV
2 Min Read
Railway officials explain why Kavach would not have prevented the Odisha train accident

320 X 50

ನವದೆಹಲಿ: ಅಪಘಾತ ನಡೆದಮಾರ್ಗದಲ್ಲಿ ಒಂದು ವೇಳೆ ಕವಚ್‌ (Kavach) ಸಕ್ರಿಯವಾಗಿದ್ದರೂ ಮೂರು ರೈಲು ದುರಂತವನ್ನು (Odisha Train Tragedy) ತಪ್ಪಿಸಲು ಸಾಧ್ಯವಿರಲಿಲ್ಲ ಎಂದು ರೈಲು ಮಂಡಳಿಯ ಸದಸ್ಯೆ ಜಯ ವರ್ಮ ಸಿನ್ಹಾ ಹೇಳಿದ್ದಾರೆ.

ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಮಾರ್ಗದಲ್ಲಿ ಕವಚ್‌ ವ್ಯವಸ್ಥೆ ಇರಲಿಲ್ಲ ಎಂಬ ಆರೋಪ ಸಂಬಂಧಿಸಿದಂತೆ  ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯಾಪಾರ ಅಭಿವೃದ್ಧಿ ಸದಸ್ಯೆ ಜಯ ವರ್ಮ ಸಿನ್ಹಾ ಮಾತನಾಡಿ, ವೇಗವಾಗಿ ಚಲಿಸುವ ವಾಹನದ ಮುಂದೆ ಇದ್ದಕ್ಕಿದ್ದಂತೆ ಅಡಚಣೆ ಸೃಷ್ಟಿಯಾದರೆ ಪ್ರಪಂಚದ ಯಾವುದೇ ತಂತ್ರಜ್ಞಾನವು ಆ ಅಪಘಾತವನ್ನು ತಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಏನಿದು ಕವಚ್‌? ಹೇಗೆ ಕೆಲಸ ಮಾಡುತ್ತೆ?

ಪ್ರಾಥಮಿಕ ತನಿಖೆಯಲ್ಲಿ ಸಿಗ್ನಲಿಂಗ್‌ನಲ್ಲಿ ದೋಷ ಪತ್ತೆಯಾಗಿರುವುದು ತಿಳಿದು ಬಂದಿದೆ. ರೈಲ್ವೇ ಸುರಕ್ಷತಾ ಆಯುಕ್ತರ ವಿವರವಾದ ವರದಿಗಾಗಿ ನಾವು ಇನ್ನೂ ಕಾಯುತ್ತಿದ್ದೇವೆ ಎಂದು ಹೇಳಿದರು.   ಇದನ್ನೂ ಓದಿ: ರೈಲು ಡಿಕ್ಕಿಯಾದ ಶಬ್ದಕ್ಕೆ ಹೆದರಿ ಬಿಗಿಯಾಗಿ ಕಿಟಕಿ ಸರಳುಗಳನ್ನು ಹಿಡಿದು ಬಚಾವಾದೆ – ದುರಂತದಲ್ಲಿ ಬದುಕುಳಿದವನ ಮಾತು

ಗೂಡ್ಸ್‌ ರೈಲು ಹಳಿ ತಪ್ಪಿರಲಿಲ್ಲ. ಹಳಿ ತಪ್ಪಿದ ಕೋರಮಂಡಲ್ ಎಕ್ಸ್‌ಪ್ರೆಸ್‌ (Coromandel Express) ಬೋಗಿಗಳು ಇನ್ನೊಂದು ಮುಖ್ಯ ಹಳಿ ಮೇಲೆ ಬಿದ್ದ ಪರಿಣಾಮ ಗರಿಷ್ಠ ಮಟ್ಟದ ಸಾವು ನೋವು ಸಂಭವಿಸಿದೆ. ಕೋರಮಂಡಲ್ ಎಕ್ಸ್‌ಪ್ರೆಸ್‌ನ ಹಳಿತಪ್ಪಿದ ಬೋಗಿಗಳು ಗಂಟೆಗೆ 126 ಕಿ.ಮೀ ವೇಗದಲ್ಲಿ ಬರುತ್ತಿದ್ದ ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ ಎಂದು ತಿಳಿಸಿದರು.

ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ (Electronic Interlocking) ಸಮಯದಲ್ಲಿ ಉಂಟಾದ ಬದಲಾವಣೆಯಿಂದ ಅಪಘಾತ ಸಂಭವಿಸಿರುವುದು ತಿಳಿದು ಬಂದಿದೆ. ಈ ಬದಲಾವಣೆಯನ್ನು ಯಾರು ಮಾಡಿದ್ದಾರೆ ಮತ್ತು ಅದು ಹೇಗೆ ಸಂಭವಿಸಿತು ಎಂಬುದನ್ನು ಸರಿಯಾದ ತನಿಖೆಯ ನಂತರ ಕಂಡುಹಿಡಿಯಲಾಗುವುದು ಎಂದು ಅಧಿಕಾರಿಗಳು ಹೇಳಿದರು.

ಅಪಘಾತ ಹೇಗಾಯ್ತು?
ಒಡಿಶಾ ಬಾಲಸೋರ್‌ನ ಬಹನಾಗ ಬಜಾರ್ ರೈಲು ನಿಲ್ದಾಣದಲ್ಲಿ 4 ಹಳಿಗಳು ಇವೆ. ಈ ಪೈಕಿ ಎರಡು ಮುಖ್ಯ ಅಥವಾ ಮೇನ್‌ ಹಳಿಗಳು ಆಗಿದ್ದರೆ ಇನ್ನು ಎರಡು ಲೂಪ್‌ ಹಳಿಗಳು. ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದೇ ಇರಲು ಗೂಡ್ಸ್‌ ರೈಲುಗಳನ್ನು ನಿಲ್ದಾಣದ ಲೂಪ್‌ ಲೈನಿನಲ್ಲಿ ನಿಲ್ಲಿಸಿರುತ್ತಾರೆ. ಅದೇ ರೀತಿಯಾಗಿ ಒಂದು ಹಳಿಯಲ್ಲಿ ಗೂಡ್ಸ್‌ ರೈಲನ್ನು ನಿಲ್ಲಿಸಲಾಗಿತ್ತು. ಸಂಜೆಯ ವೇಳೆ ವೇಗವಾಗಿ ಮುಖ್ಯ ಹಳಿಯಲ್ಲಿ ಬರುತ್ತಿದ್ದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ನಿಂದಾಗಿ ಗೂಡ್ಸ್‌ ರೈಲು ನಿಂತಿದ್ದ ಹಳಿಯನ್ನು ಪ್ರವೇಶಿಸಿ ಗುದ್ದಿದೆ. ಈ ರೈಲು ಡಿಕ್ಕಿ ಹೊಡೆಯುವ ಸಮಯದಲ್ಲೇ ಇನ್ನೊಂದು ಮುಖ್ಯ ಹಳಿಯಲ್ಲಿ ಬೆಂಗಳೂರಿನಿಂದ ಹೌರಾಗೆ ಹೊರಟಿದ್ದ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಬಂದಿದೆ. ಗೂಡ್ಸ್‌ ರೈಲಿಗೆ  ಗುದ್ದಿದ ರಭಸಕ್ಕೆ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳು ಯಶವಂತಪುರದಿಂದ ಹೊರಟಿದ್ದ ರೈಲಿನ ಕೊನೆಯ ಎರಡು ಬೋಗಿಗಳ ಮೇಲೆ ಬಿದ್ದ ಪರಿಣಾಮ ಸಾವು ನೋವು ಹೆಚ್ಚಾಗಿದೆ.

Share This Article