ನವದೆಹಲಿ: ರೈಲು ನಿಗದಿತ ಸಮಯಕ್ಕೆ ನಿಲ್ದಾಣವನ್ನು ತಲುಪುವುದಿಲ್ಲ ಎಂದು ಪ್ರಯಾಣಿಕರು ಪದೇ ಪದೇ ಆರೋಪಿಸುತ್ತಲೇ ಇದ್ದಾರೆ. ಇದನ್ನು ಸರಿಪಡಿಸಲು ರೈಲ್ವೇ ಇಲಾಖೆಯು ಹೊಸ ಹೆಜ್ಜೆ ಇಟ್ಟಿದೆ.
ಹೌದು, ರೈಲು ತಡವಾಗಿ ನಿಲ್ದಾಣ ತಲುಪಿದರೆ ಪ್ರಯಾಣಿಕರಿಗೆ ಪರಿಹಾರ ನೀಡುವ ಹಾಗೂ ವಿಶೇಷ ವಿಮಾ ಸೌಲಭ್ಯ ಒದಗಿಸಲು ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೊರೇಷನ್(ಐಆರ್‌ಸಿಟಿಸಿ) ಮುಂದಾಗಿದೆ. ಇದೇ ಮೊದಲ ಬಾರಿಗೆ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ರೈಲು ಪ್ರಯಾಣಿಕರಿಗೆ ಸಂತಸ ತಂದಿದೆ.
Advertisement
ಈ ಹೊಸ ನಿಯಮವನ್ನು ಪ್ರಾಯೋಗಿಕವಾಗಿ ತೇಜಸ್ ಎಕ್ಸ್‌ಪ್ರೆಸ್ ರೈಲಿಗೆ ಮಾತ್ರ ಅಳವಡಿಸಲಾಗುತ್ತಿದೆ. ಈ ಮೂಲಕ ತೇಜಸ್ ಎಕ್ಸ್‌ಪ್ರೆಸ್ ರೈಲು ಒಂದು ಗಂಟೆ ತಡವಾದರೆ ಪ್ರಯಾಣಿಕರಿಗೆ ತಲಾ 100 ರೂ. ಪರಿಹಾರ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಎರಡು ಗಂಟೆ ತಡವಾಗಿ ರೈಲು ನಿಲ್ದಾಣ ತಲುಪಿದರೆ 250 ರೂ. ಪರಿಹಾರ ಪಾವತಿಸಲು ಐಆರ್‌ಸಿಟಿಸಿ ನಿರ್ಧರಿಸಿದೆ.
Advertisement
Advertisement
ತೇಜಸ್ ಎಕ್ಸ್‌ಪ್ರೆಸ್ ರೈಲು ಅಕ್ಟೋಬರ್ 4 ರಿಂದ ಲಕ್ನೋದಿಂದ ನವದೆಹಲಿಗೆ ಕಾರ್ಯಾಚರಣೆ ಆರಂಭಿಸಲಿದೆ. ವಾರದಲ್ಲಿ ಆರು ದಿನಗಳು ಮಾತ್ರ ಪ್ರಯಾಣಿಸಲಿದ್ದು, ಒಂದು ವೇಳೆ ರೈಲು ವಿಳಂಬದವಾದರೆ ಪ್ರಯಾಣಿಕರು ಪರಿಹಾರ ಮೊತ್ತವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ಯಾವ ರೀತಿ ಪರಿಹಾರ ವಿತರಣೆ ಮಾಡಲಾಗುತ್ತದೆ? ಹಣವನ್ನು ನೇರವಾಗಿ ಪ್ರಯಾಣಿಕರ ಖಾತೆಗೆ ಬರುತ್ತಾ ಎನ್ನುವ ಕುರಿತು ಐಆರ್‌ಸಿಟಿಸಿ ಸ್ಪಷ್ಟನೆ ನೀಡಿಲ್ಲ.
Advertisement
ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ರೈಲು ಪ್ರಯಾಣಿಕರಿಗೆ ವಿಳಂಬದ ಪರಿಹಾರ ಹಣವನ್ನು ನೀಡಲಾಗುತ್ತದೆ. ಪ್ಯಾರಿಸ್ ನಗರದಲ್ಲಿಯೂ ರೈಲು ಕಂಪನಿ ಪ್ರಯಾಣಿಕರಿಗೆ ವಿಳಂಬದ ಪರಿಹಾರ ಮೊತ್ತವನ್ನು ನೇರವಾಗಿ ಖಾತೆಗೆ ಹಾಕುತ್ತದೆ.
ವಿಮಾ ಸೌಲಭ್ಯ:
ತೇಜಸ್ ಎಕ್ಸ್‌ಪ್ರೆಸ್ ಟಿಕೆಟ್ ಬುಕ್ಕಿಂಗ್ ಮೇಲೆ ಪ್ರಯಾಣಿಕರಿಗೆ 25 ಲಕ್ಷ ರೂ. ಮೌಲ್ಯದ ವಿಮೆಯನ್ನು ಸಹ ನೀಡುತ್ತದೆ. ಪ್ರಯಾಣದ ವೇಳೆ ವಸ್ತುಗಳು ಕಳ್ಳತನ, ದರೋಡೆ ನಡೆದರೆ ಒಂದು ಲಕ್ಷ ರೂ. ವಿಮಾ ಮೊತ್ತ ಪರಿಹಾರವಾಗಿ ಸಿಗಲಿದೆ. ಇದಕ್ಕೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು ಸಲ್ಲಿಸಿದಾಗ ವಿಮಾ ಕಂಪನಿಯು ಎರಡು ಮೂರು ದಿನಗಳಲ್ಲಿ ಪ್ರಯಾಣಿಕರ ಪ್ರಯಾಣ ಸುರಕ್ಷಾ ವಿಮೆಯನ್ನು ಪಾವತಿಸಲಿದೆ.
ರೈಲು ದರ ಎಷ್ಟಿದೆ:
ತೇಜಸ್ ಎಕ್ಸ್‌ಪ್ರೆಸ್ ರೈಲು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಸಂಪೂರ್ಣವಾಗಿ ಹವಾನಿಯಂತ್ರಿತ (ಎಸಿ) ಹೊಂದಿದೆ. ಪ್ರಯಾಣಿಕರಿಗೆ ಉಚಿತವಾಗಿ ಟೀ ಹಾಗೂ ಚಹಾ ಸಿಗಲಿದೆ. ಜೊತೆಗೆ ಬೇಡಿಕೆ ಮೇರೆಗೆ ಕುಳಿತಲ್ಲಿಯೇ ಓಆರ್ ಯಂತ್ರದ ಮೂಲಕ ನೀರು ಪೂರೈಸಲಾಗುತ್ತದೆ. ಈ ರೈಲಿನಲ್ಲಿ ಎರಡು ಮಾದರಿಯ ಪ್ರಯಾಣದ ವ್ಯವಸ್ಥೆ ಇದ್ದು, ಎಸಿ ಚೇರ್ ಕಾರ್ ಪ್ರಯಾಣಿಕರಿಗೆ 1,280 ರೂ. ಹಾಗೂ ಎಕ್ಸಿಕ್ಯೂಟಿವ್ ಚೇರ್ ಕಾರ್ ಪ್ರಯಾಣಿಕರಿಗೆ 2,450 ರೂ. ನಿಗದಿಯಾಗಿದೆ.
ರೈಲಿನ ವಿಶೇಷತೆ ಏನು?
ಭೂಮಿಯ ಮೇಲೆ ಚಲಿಸುವ ವಿಮಾನ ಎಂದೇ ಈ ರೈಲನ್ನು ಭಾರತೀಯ ರೈಲ್ವೇ ಬಣ್ಣಿಸಿದೆ. ಜರ್ಮನ್ ಕೋಚ್ ಹೊಂದಿರುವ ತೇಜಸ್ ರೈಲಿನ ಪ್ರತಿ ಸೀಟ್‍ನಲ್ಲಿ ಎಲ್‍ಇಡಿ ಸ್ಕ್ರೀನ್, ಕಾಫಿ ಮತ್ತು ಟೀ ಪೂರೈಕೆ ಯಂತ್ರ, ವೈಫೈ ಸಂಪರ್ಕವಿದೆ. ಈ ರೈಲು 13 ಬೋಗಿಗಳನ್ನು ಒಳಗೊಂಡಿದೆ. 56 ಸೀಟಿನ ಸಾಮಥ್ರ್ಯ ಇರುವ ಒಂದು ಎಕ್ಸ್ ಕ್ಯೂಟಿವ್ ಬೋಗಿ, ಮಾತ್ರಲ್ಲದೆ ಎಲ್ಲ ಬೋಗಿಗಳಿಗೆ ಸ್ವಯಂಚಾಲಿತ ಬಾಗಿಲುಗಳು ಇವೆ.
ಸಿಸಿಟಿವಿ ಕ್ಯಾಮೆರಾ, ಬೆಂಕಿ ನಿರೋಧಕ ಮತ್ತು ಹೊಗೆ ಪತ್ತೆ ಹಚ್ಚುವ ವ್ಯವಸ್ಥೆ, ಅಲ್ಲದೆ, ಕೋಚ್‍ನಲ್ಲಿ ಗ್ರಾಫಿಟಿ ಪೇಂಟ್ ಬಳಸಲಾಗಿದೆ. ಇದರಿಂದಾಗಿ ಕೋಚ್ ಸ್ವಚ್ಛವಾಗಿರಲಿದೆ. ವಿಮಾನದ ಟಿಕೆಟ್ ದರಕ್ಕಿಂತ ತೇಜಸ್ ರೈಲಿನ ದರ ಅಗ್ಗವಾಗಿದ್ದು, ಶತಾಬ್ದಿ ಎಕ್ಸ್‍ಪ್ರೆಸ್ ರೈಲಿಗಿಂತ ಶೇ.20 ರಷ್ಟು ಅಧಿಕವಾಗಿದೆ.
ಪ್ರತಿ ಗಂಟೆಗೆ 200 ಕಿ.ಮೀ ವೇಗದಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ರೈಲು ಹೊಂದಿದ್ದು, ಪ್ರತಿಯೊಂದು ಕೋಚ್ ತಯಾರಿಕೆಗೆ 3.25 ಕೋಟಿ ರೂ. ಖರ್ಚಾಗಿದೆ. ಚರ್ಮದ ಸೀಟ್‍ಗಳು, ಎಲ್‍ಸಿಡಿ ಸ್ಕ್ರೀನ್ ಗಳು ಮತ್ತು ಕೂಡಲೇ ಯಾರನ್ನಾದರೂ ಕರೆಯಲು ಕಾಲ್ ಬಟನ್ ವಿಶೇಷ ಸೌಲಭ್ಯವನ್ನು ಹೊಂದಿದೆ.