ChikkaballapurDistrictsKarnatakaLatestMain Post

ನಕಲಿ ಲೋಕಾಯುಕ್ತ ಅಧಿಕಾರಿಯಿಂದ ತಾಲೂಕು ಕಚೇರಿ ಮೇಲೆ ದಾಳಿ- ಐಡಿ ಕಾರ್ಡ್‌ ತೋರಿಸಿ ಎಂದಿದ್ದಕ್ಕೆ ಎಸ್ಕೇಪ್

ಚಿಕ್ಕಬಳ್ಳಾಪುರ: ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು ಪಾಲಿಗೆ ಲೋಕಾಯುಕ್ತ (Lokayukta) ಸಂಸ್ಥೆ ಸಿಂಹಸ್ವಪ್ನವೇ ಸರಿ. ಆದರೆ ಚಿಕ್ಕಬಳ್ಳಾಪುರ (Chikkaballapur) ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳ ವೇಷದಲ್ಲಿ ಬಂದಿದ್ದ ಇಬ್ಬರು ಐಡಿ ಕಾರ್ಡ್ ತೋರಿಸಿ ಎಂದಾಕ್ಷಣ ತಾಲೂಕು ಕಚೇರಿಯಿಂದ ಎಸ್ಕೇಪ್ ಆದ ಘಟನೆ ನಡೆದಿದೆ.

ಹೈಫೈ ಆಫೀಸರ್‌ನಂತೆ ನೀಟಾಗಿ ಇನ್‍ಶರ್ಟ್ ಮಾಡ್ಕೊಂಡು, ತಲೆಗೆ ಹ್ಯಾಟು, ಕೈಯಲ್ಲಿ ಫೈಲು ಹಿಡಿದುಕೊಂಡು ತಾಲೂಕು ಕಚೇರಿಗೆ ಬಂದಿರುವ ಇಬ್ಬರು ನಕಲಿ ಲೋಕಾಯುಕ್ತ ಅಧಿಕಾರಿಗಳು, ತಹಶೀಲ್ದಾರ್ ಮುಂದೆಯೇ ಕಾಲು ಮೇಲೆ ಕಾಲು ಹಾಕಿ ಕೂತಿದ್ದಾರೆ. ಇವರಲ್ಲಿ ಒಬ್ಬಾತ ತನ್ನನ್ನು ಪ್ರಣವ್ ಎಂದು ಪರಿಚಯಿಸಿಕೊಂಡು, ತಾನು ಲೋಕಾಯುಕ್ತ ಅಧಿಕಾರಿಯಾಗಿದ್ದು, ಬೆಂಗಳೂರಿನಿಂದ ಬಂದಿದ್ದೇನೆ ಎಂದು ಹೇಳಿದ್ದಾನೆ.

ಅವರು ಮೊದಲು ತಾಲೂಕು ಕಚೇರಿ ಪಕ್ಕದ ಸಬ್‍ರಿಜಿಸ್ಟ್ರಾರ್ ಕಚೇರಿ ಕಡೆ ತೆರಳಿದ್ದಾರೆ. ಅಲ್ಲಿ ಅರ್ಧ, ಮುಕ್ಕಾಲು ಗಂಟೆ ತಾಲೂಕು ಕಚೇರಿ ಸುತ್ತಲೂ ಅಲೆದಾಡಿ ತಾಲೂಕು ಕಚೇರಿಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ನೇರವಾಗಿ ಶಿರೆಸ್ತೇದಾರ ಬಳಿ ತೆರಳಿ ಸೊಪ್ಪಹಳ್ಳಿ ಗ್ರಾಮದ ಸರ್ವೆ ನಂಬರ್ 103ಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.

ಇದಾದ ಬಳಿಕ ತಾಲೂಕು ಕಚೇರಿಯ (Taluk Office) ಎಲ್ಲಾ ಶಾಖೆಗಳಿಗೂ ಭೇಟಿ ನೀಡಿ ತನಗೆ ಬೇಕಾದ ದಾಖಲೆಗಳನ್ನು ಪಡೆದುಕೊಂಡಿದ್ದಾನೆ. ತುರ್ತು, ಜರೂರು ಅಂತ ಹೇಳಿ ಕೆಳಹಂತದ ಅಧಿಕಾರಿಗಳ ಬಳಿ ತನಗೆ ಬೇಕಾದ ಎಲ್ಲಾ ದಾಖಲೆಗಳನ್ನು ಪಡೆದು ಹೋಗುತ್ತಿದ್ದ ಅಸಾಮಿಯನ್ನು ಕಂಡ ತಹಶೀಲ್ದಾರ್ ಗಣಪತಿ ಶಾಸ್ತ್ರಿ ತಡೆದು ನಿಲ್ಲಿಸಿದ್ದಾರೆ. ಅವರ ಬಳಿ, ನೀವು ಯಾರು, ಎಲ್ಲಿ ನಿಮ್ಮ ಐಡಿ ಕಾರ್ಡು ತೋರಿಸಿ ಎಂದಿದ್ದಾರೆ.

ಆಗ ಆತ ಐಡಿ ಕಾರ್ಡ್ ತಂದಿಲ್ಲ ಅಂದಿದ್ದಾನೆ. ಸರಿ ನಿಮ್ಮ ಹೆಡ್ ಆಫೀಸ್‍ನ ಎಸ್ಪಿಯವರಿಗೆ ಕರೆ ಮಾಡಿಕೊಡಿ, ನಾನು ಮಾತಾಡುತ್ತೇನೆ ಎಂದು ಹೇಳಿದ್ದಾರೆ. ಅದಕ್ಕೆ ಪ್ರಣವ್ ಕರೆ ಮಾಡುವವನ ತರ ಮಾಡಿ ನಾಟಕ ಮಾಡಿದ್ದಾನೆ. ಈ ವೇಳೆ ಆಚೆ ಐಡಿ ಕಾರ್ಡ್ ಇದೆ ತರುತ್ತೇನೆ ಎಂದು ಹೇಳಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಕೇರಳದಲ್ಲಿ ಕಲ್ಲು ತೂರಾಟ- ಪಾರಾಗಲು ಹೆಲ್ಮೆಟ್ ಧರಿಸಿ ಬಸ್ ಚಲಿಸಿದ ಕೆಎಸ್‍ಆರ್‌ಟಿಸಿ ಚಾಲಕ

ಲೋಕಾಯುಕ್ತ ಅಧಿಕಾರಿಗಳ ಹೆಸರಿನಲ್ಲಿ ಪರಿಚಯ ಮಾಡಿಕೊಂಡು ಕೆಳಹಂತದ ಅಧಿಕಾರಿಗಳಿಗೆ ನಕಲಿ ಅಧಿಕಾರಿಗಳು ಎಂದು ಸಣ್ಣ ಸುಳಿವು ಸಿಗದ ಹಾಗೆ ಬೇಕಾದ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಸ್ಥಳೀಯ ಲೋಕಾಯುಕ್ತ ಕಚೇರಿ ಅಧಿಕಾರಿಗಳ ಮುಖ ಪರಿಚಯ ಇದ್ದ ಕಾರಣ ಹಾಗೂ ಲೋಕಾಯುಕ್ತರ ವೇಷದಲ್ಲಿ ಬಂದಿದ್ದ ಅಧಿಕಾರಿಗಳ ಬಳಿ ವಕೀಲರು ಬಳಸುವ ಲಕೋಟೆಗಳು ಇದ್ದ ಕಾರಣ ಅವರ ಮೇಲೆ ಸಹಜವಾಗಿಯೇ ತಹಶೀಲ್ದಾರ್‍ಗೆ ಅನುಮಾನ ಬಂದಿತ್ತು. ಹೀಗಾಗಿ ಪ್ರಶ್ನೆ ಮಾಡಲು ಆರಂಭಿಸಿದ ಮರುಕ್ಷಣವೇ ನಕಲಿ ಅಧಿಕಾರಿಗಳು ಕಚೇರಿಯಿಂದ ಕಾಲ್ಕಿತ್ತಿದ್ದಾರೆ. ಸದ್ಯ ನಕಲಿ ಲೋಕಾಯುಕ್ತ ಅಧಿಕಾರಿಗಳ ವಿರುದ್ದ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಪೌರ ಕಾರ್ಮಿಕರ ಕೆಲಸ ನೋಡಿದ್ರೆ ಕಣ್ಣೀರು ಬರುತ್ತೆ – ಬೊಮ್ಮಾಯಿ ಭಾವುಕ

Live Tv

Leave a Reply

Your email address will not be published.

Back to top button