ರಾಯಚೂರು: ಕೊರೊನಾ ವೈರಸ್ ಸೋಂಕು ಹರಡುವುದನ್ನ ತಡೆಯಲು ವಿದೇಶದಿಂದ ಬರುವ ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಹೋಂ ಕ್ವಾರಂಟೈನ್ ಇಲ್ಲವೆ ಆಸ್ಪತ್ರೆ ಐಸೋಲೇಷನ್ ವಾರ್ಡ್ ಗೆ ದಾಖಲಿಸಲಾಗುತ್ತಿದೆ. ಆದರೆ ಜಿಲ್ಲೆಯ ಶಕ್ತಿನಗರದ ಆರ್‌ಟಿಪಿಎಸ್ ಕಾಲೋನಿಯಲ್ಲಿ ಹೊಂ ಕ್ವಾರಂಟೈನ್‍ನಲ್ಲಿದ್ದ ಆರ್‌ಟಿಪಿಎಸ್, ವೈಟಿಪಿಎಸ್ ಅಧಿಕಾರಿ ದಂಪತಿ ಹಾಗೂ ಅವರ ಮಗ ಮತ್ತು ಮಗನ ಸ್ನೇಹಿತೆ ಸ್ವತಃ ವೈದ್ಯೆಯಾಗಿದ್ದರೂ ಹೋಂ ಕ್ವಾರಂಟೈನ್ ನಿಯಮವನ್ನು ಉಲ್ಲಂಘನೆ ಮಾಡಿದ್ದಾರೆ.
ಯರಮರಸ್‍ನ ವೈಟಿಪಿಎಸ್ ಸೂಪರಿಡೆಂಟ್ ಇಂಜನೀಯರ್ ಎಸ್.ಆರ್ ಕಬಾಡೆ ಹಾಗೂ ಅವರ ಪತ್ನಿ ಅನುಪಮ ಆರ್‌ಟಿಪಿಎಸ್ ನಲ್ಲಿ ಅಕೌಂಟ್ ಆಫೀಸರ್ ಆಗಿದ್ದು, ಹೋಂ ಕ್ವಾರಂಟೈನ್ ಅವಧಿಯಲ್ಲಿ ಕಚೇರಿಗೆ ತೆರಳಿ ಕೆಲಸ ಮಾಡಿದ್ದಾರೆ. ಮಾರ್ಕೆಟ್ ಸೇರಿ ಜನಸಂದಣಿ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ದಂಪತಿ ಮಗನ ಸ್ನೇಹಿತೆ ಜರ್ಮನಿಯಿಂದ ಶಕ್ತಿನಗರಕ್ಕೆ ಬಂದಿದ್ದಳು. ಈ ವಿಚಾರವನ್ನ ಕುಟುಂಬಸ್ಥರು ಜಿಲ್ಲಾಡಳಿತಕ್ಕೆ ತಿಳಿಸಿರಲಿಲ್ಲ. ಬಳಿಕ ನಾಲ್ವರನ್ನು ಮಾರ್ಚ 14ರಿಂದ ಮಾರ್ಚ 29ರವರೆಗೆ ಹೋಂ ಕ್ವಾರೆಂಟೈನ್ ಮಾಡಲಾಗಿತ್ತು. ಈ ವೇಳೆ ಇವರು ಮನೆಯಲ್ಲಿರದೆ ಹೊರಗಡೆ ಓಡಾಡಿದ್ದಾರೆ.
Advertisement
Advertisement
ಜರ್ಮನಿಯಿಂದ ಬಂದಿದ್ದ ದಂಪತಿಯ ಮಗನ ಸ್ನೇಹಿತೆಯ ರಕ್ತ ಹಾಗೂ ಗಂಟಲು ಮಾದರಿಯನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿ ನೆಗೆಟಿವ್ ಬಂದಿದೆ, ಯಾರಲ್ಲೂ ರೋಗ ಲಕ್ಷಣಗಳಿಲ್ಲ. ಆದರೆ ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿದ್ದರಿಂದ ದೇವಸುಗೂರು ಉಪತಹಶೀಲ್ದಾರ್ ಶಕ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆ ವೈಟಿಪಿಎಸ್ ಹಿರಿಯ ಅಧಿಕಾರಿ, ಪತ್ನಿ, ಮಗ ಹಾಗೂ ಮಗನ ಸ್ನೇಹಿತೆಯ ವಿರುದ್ಧ ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.