– ವಿಶೇಷ ಪಿಂಕ್ ವಾಹನದಲ್ಲಿ ಗಸ್ತು ತಿರುಗಲಿದೆ 10 ಜನರ ತಂಡ
– ನಗರ ಹಾಗೂ ಹೊರವಲಯದಲ್ಲಿ ಮಹಿಳೆಯರ ರಕ್ಷಣೆಗೆ ಖಾಕಿ ಕ್ರಮ
ರಾಯಚೂರು: ನಗರದಲ್ಲೀಗ ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಎಲ್ಲೇ ದೌರ್ಜನ್ಯ ನಡೆಯುತ್ತೆ ಅಂತ ತಿಳಿದರೂ ಈ ವಿಶೇಷ ಸಿಬ್ಬಂದಿ ಅಲ್ಲಿ ಹೆಣ್ಣುಮಕ್ಕಳ ರಕ್ಷಣೆಗೆ ಪ್ರತ್ಯಕ್ಷವಾಗುತ್ತೆ. ಮಹಿಳಾ ಪೊಲೀಸರ ಓಬವ್ವ ಪಡೆ ಕಾಮುಕರ ಹೆಡೆಮುರಿಕಟ್ಟಲು ರಾಯಚೂರಿನಲ್ಲಿ ಸಿದ್ಧವಾಗಿದೆ.
ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರಾಯಚೂರು ಜಿಲ್ಲಾ ಪೊಲೀಸರು ಹೊಸ ಯೋಜನೆ ರೂಪಿಸಿದ್ದಾರೆ. 10 ಮಹಿಳಾ ಸಿಬ್ಬಂದಿಗೆ ಕರಾಟೆ ಸೇರಿ ಇತರೆ ತರಬೇತಿ ಹಾಗೂ ಮಹಿಳೆಯರ ರಕ್ಷಣೆ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾರ್ಯಗಾರಗಳ ಮೂಲಕ ತಿಳುವಳಿಕೆ ನೀಡಲಾಗಿದೆ. ಎರಡು ತಂಡಗಳಾಗಿ ನಗರದ ಕಾಲೇಜು, ಹಾಸ್ಟೆಲ್ ಗಳು ಸೇರಿದಂತೆ ಎಲ್ಲಡೆ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಓಬವ್ವ ಪಡೆ ವಿಶೇಷ ಪಿಂಕ್ ವಾಹನದಲ್ಲಿ ಸಂಚರಿಸಿ ಮಹಿಳೆಯರಿಗೆ ರಕ್ಷಣೆ ನೀಡಲಿದ್ದಾರೆ. ಸಹಾಯ ವಾಣಿ ಸಂಖ್ಯೆ 94808 03800 ಕ್ಕೆ ಕರೆ ಮಾಡಿದರೆ ಓಬವ್ವ ಪಡೆ ಪ್ರತ್ಯಕ್ಷ ವಾಗುತ್ತೆ.
Advertisement
Advertisement
ಕಳೆದ ಐದು ವರ್ಷದಲ್ಲಿ ರಾಯಚೂರು ಜಿಲ್ಲೆಯಲ್ಲಿ 72 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಕಳೆದ ವರ್ಷ 2018 ರಲ್ಲಿ 22 ಪ್ರಕರಣ, 2019ರಲ್ಲಿ 9 ಪ್ರಕರಣ ದಾಖಲಾಗಿವೆ. ಅಲ್ಲದೆ ಕಳೆದ ಐದು ವರ್ಷದಲ್ಲಿ 173 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, 2019ರಲ್ಲೇ 31 ಪ್ರಕರಣ ದಾಖಲಾಗಿವೆ. ಆದರೆ ಇಷ್ಟು ಪ್ರಕರಣಗಳಲ್ಲಿ ಇದುವರೆಗೆ ಕೇವಲ 3 ಪ್ರಕರಗಣಗಳಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 70 ಪ್ರಕರಣಗಳು ನ್ಯಾಯಾಲಯದಲ್ಲಿ ವಜಾಗೊಂಡಿವೆ. ಇದಕ್ಕೆ ಪ್ರತಿಕೂಲ ಸಾಕ್ಷಿಯೇ ಕಾರಣವಾಗಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ ನಿಂತಿಲ್ಲ. ಹೀಗಾಗಿ ಓಬವ್ವ ಪಡೆಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಹೇಳಿದ್ದಾರೆ.
Advertisement
Advertisement
ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಜಿಲ್ಲಾ ಪೊಲೀಸರು ಹೊಸದೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಆಸಕ್ತ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಕರಾಟೆ ಸೇರಿದಂತೆ ಆತ್ಮರಕ್ಷಣೆ ವಿದ್ಯೆ ಕಲಿಸಲು ಇಲಾಖೆ ಮುಂದಾಗಿದೆ. ಖಾರದ ಪುಡಿ, ಮೆಣಸಿನ ಪುಡಿ ಸದಾ ಜೊತೆಗಿಟ್ಟುಕೊಳ್ಳಿ ಅಂತ ಸಲಹೆ ನೀಡುವ ಪೊಲೀಸರು ಓಬವ್ವ ಪಡೆಯ ಮೂಲಕ ಮಹಿಳಾ ರಕ್ಷಣೆಗೆ ಮುಂದಾಗಿರುವುದಕ್ಕೆ ರಾಯಚೂರಿನ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.