ರಾಯಚೂರು: ಜಿಲ್ಲೆಯನ್ನ ಬಿಸಿಲನಾಡು ಅಂತ ಕರೆಯುವುದೇನೋ ನಿಜ ಆದರೆ ಇಲ್ಲಿನ ಭಿಕ್ಷುಕರಿಗೆ ಬಿಸಿಲು ತಟ್ಟುತ್ತೋ ಇಲ್ಲವೋ ಗೊತ್ತಿಲ್ಲ. ಚಿಕ್ಕಮಕ್ಕಳನ್ನ ಬಳಸಿಕೊಂಡು ಸುಡುಬಿಸಿಲಲ್ಲಿ ಮಹಿಳೆಯರು ಭಿಕ್ಷೆ ಬೇಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಎಲ್ಲೆಲ್ಲಿಂದಲೋ ಬರುವ ಭಿಕ್ಷುಕರ ಕಾಟಕ್ಕೆ ರಾಯಚೂರು ಜನ ಸಹ ಬೇಸತ್ತು ಹೋಗಿದ್ದಾರೆ.
Advertisement
ಪುಟ್ಟಕಂದಮ್ಮಗಳನ್ನ ಕಂಕುಳಲ್ಲಿ ಇಟ್ಟುಕೊಂಡು ಭಿಕ್ಷೆ ಬೇಡುವವರ ಹಾವಳಿ ಇತ್ತೀಚೆಗೆ ನಗರದಲ್ಲಿ ವಿಪರೀತವಾಗಿದೆ. ಸುಡುಬಿಸಿಲಲ್ಲೂ ಸದಾ ನಿದ್ರೆಗೆ ಜಾರಿರುವ ಕಂದಮ್ಮಗಳೇ ಈ ಮಹಿಳೆಯರಿಗೆ ಬಂಡವಾಳ. ಟ್ರಾಫಿಕ್ ಸಿಗ್ನಲ್, ಹೋಟೆಲ್‍ಗಳ ಮುಂದೆ, ನಗರದ ಬಸವೇಶ್ವರ ವೃತ್ತ, ಚಂದ್ರಮೌಳೇಶ್ವರ ವೃತ್ತ ಸೇರಿದಂತೆ ನಗರದ ಹಲವೆಡೆ ಬೆಳಗ್ಗೆಯಿಂದ ರಾತ್ರಿವರೆಗೆ ನೂರಾರು ಜನ ಭಿಕ್ಷುಕರು ಕಾಣಿಸಿಕೊಳ್ಳುತ್ತಾರೆ.
Advertisement
ಸಾರ್ವಜನಿಕರಿಗೆ ಈ ಭಿಕ್ಷುಕರದ್ದೇ ದೊಡ್ಡ ಕಾಟವಾಗಿದೆ. ಸಿಗ್ನಲ್‍ಗಳಲ್ಲಂತೂ ಸಿಕ್ಕಾಪಟ್ಟೆ ಹಿಂಸೆ ಕೊಡುತ್ತಾರೆ. ಆದರೆ ಇವರು ಭಿಕ್ಷಾಟನೆಗೆ ಬಳಸುವ ಮಕ್ಕಳು ಸದಾ ನಿದ್ರೆಯಲ್ಲೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಬೇರೆ ಜಿಲ್ಲೆ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದಲೂ ಬಂದಿರುವ ಭಿಕ್ಷುಕರು ಇಲ್ಲೆ ಸೇರಿಕೊಂಡಿದ್ದಾರೆ.
Advertisement
Advertisement
ಕಂದಮ್ಮಗಳಿಗೆ ನಿದ್ರೆ ಬರುವ ಔಷಧಿ ನೀಡಿ ಭಿಕ್ಷಾಟನೆ ದಂಧೆ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಂದೇ ಮಗುವನ್ನ ಬೇರೆ ಬೇರೆ ಮಹಿಳೆಯರು ಶಿಫ್ಟ್ ಪ್ರಕಾರ ಬಳಸಿಕೊಳ್ಳುತ್ತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ಮಹಿಳಾ ನಿರಾಶ್ರಿತರ ಕೇಂದ್ರ ಇಲ್ಲದೆ ಇರುವುದು ಹೆಚ್ಚು ಮಹಿಳಾ ಭಿಕ್ಷುಕರು ಇರಲು ಕಾರಣವಾಗಿದೆ. ಇಳಿವಯಸ್ಸಿನ ವೃದ್ದೆಯರು, ಅನಾರೋಗ್ಯ ಪೀಡಿತ ಅಜ್ಜಿಯರು ಸಹ ಸುಡುಬಿಸಿಲಲ್ಲೇ ಭಿಕ್ಷಾಟನೆ ಮಾಡುತ್ತಿದ್ದರೂ ಅವರ ರಕ್ಷಣೆಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಜನ ಆರೋಪಿಸಿದ್ದಾರೆ.
ಪುಟ್ಟ ಕಂದಮ್ಮಗಳನ್ನ ಭಿಕ್ಷಾಟನೆಯ ವಸ್ತುಗಳನ್ನಾಗಿ ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ. ಸುಡುಬಿಸಿಲಲ್ಲಿ ಏಳೆಂಟು ತಿಂಗಳ ಹಸುಗೂಸುಗಳನ್ನ ಹಿಡಿದು ಬರುವ ಭಿಕ್ಷುಕರ ಸಂಖ್ಯೆ ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತು ಕ್ರಮಕೈಗೊಳ್ಳಬೇಕಿದೆ. ಭಿಕ್ಷುಕರ ಹಾವಳಿಯನ್ನ ತಪ್ಪಿಸಬೇಕು ಅಂತ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.