– ಮರೆಯಾದ ಸಂತನ ಮರೆಯಲಾಗದ ನೆನಪುಗಳು
ರಾಯಚೂರು: ಬಿಸಿಲನಾಡು ರಾಯಚೂರು ಜಿಲ್ಲೆಗೂ ಪೇಜಾವರ ಶ್ರೀಗಳಿಗೂ ಸುಮಾರು 40 ವರ್ಷಗಳ ಅವಿನಾಭಾವ ಸಂಬಂಧವಿದೆ. ಹೀಗಾಗಿ ಜಿಲ್ಲೆ ಪೇಜಾವರ ಶ್ರೀಗಳನ್ನ ನಾನಾ ಸಂದರ್ಭಗಳಿಂದ ನೆನಪಿಸಿಕೊಳ್ಳುತ್ತಲೇ ಇರುತ್ತದೆ. 1950ರಲ್ಲಿ ಮೊದಲ ಬಾರಿಗೆ ತಮ್ಮ ಗುರುಗಳಾದ ಉಡುಪಿಯ ವಿದ್ಯಾಮಾನ್ಯ ತೀರ್ಥರೊಂದಿಗೆ ವಿಶ್ವೇಶತೀರ್ಥರು ರಾಯಚೂರಿಗೆ ಬಂದಿದ್ದರು. ನಂತರ 1980 ರಿಂದ ಪ್ರತಿವರ್ಷ ಜನವರಿ ತಿಂಗಳಲ್ಲಿ ರಾಯಚೂರು ಜಿಲ್ಲೆಗೆ ಆಗಮಿಸುತ್ತಿದ್ದರು. ನೂರಾರು ಜನ ಭಕ್ತರ ಸಮೂಹವನ್ನೇ ಹೊಂದಿದ್ದ ಶ್ರೀಗಳು ಉಡುಪಿಯ ಶ್ರೀಕೃಷ್ಣಮಠದ ಪರ್ಯಾಯ ಪೂರ್ವದಲ್ಲಿ ಜಿಲ್ಲೆಯಲ್ಲಿ ಪರ್ಯಾಯ ಸಂಚಾರವನ್ನು ನಡೆಸುತ್ತಿದ್ದರು.
Advertisement
ಆಂಜನೇಯನ ಪತಿಷ್ಠಾಪಿಸಿದ್ದ ಶ್ರೀಗಳು:
ನಗರದ ಸದರ್ ಬಜಾರ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಆಗಿದ್ದ ಎಂ.ಪಾಷಾ ತಮ್ಮ ಸ್ವಗ್ರಾಮ ತುಮಕೂರು ಜಿಲ್ಲೆಯ ನೆರಳಕೇರೆ ಎಂಬಲ್ಲಿ ಪ್ರಾಣದೇವರ ದೇವಾಲಯ ಕಟ್ಟಿಸಿದ್ದರು. ಆಂಜನೇಯ ಮೂರ್ತಿ ಪ್ರತಿಷ್ಠಾಪನೆಯನ್ನು ಪೇಜಾವರ ಶ್ರೀಗಳ ಅಮೃತಹಸ್ತದಿಂದ ನೆರವೇರಿಸಬೇಕು ಅನ್ನೋ ಅಪೇಕ್ಷೆಯನ್ನು ಹೊಂದಿದ್ದರು. ರಾಯಚೂರು ನಗರಕ್ಕೆ ಪೇಜಾವರ ಶ್ರೀಗಳು ಆಗಮಿಸಿದಾಗ ಪೊಲೀಸ್ ಅಧಿಕಾರಿ ಎಂ.ಪಾಷಾ ಶ್ರೀಗಳಲ್ಲಿ ಮನವಿ ಮಾಡಿದ್ದರು. ಆದರೆ ಆಗ ಮುಂದಿನ ಎರಡು ವರ್ಷಗಳವರೆಗೆ ಕಾರ್ಯಕ್ರಮಗಳು ನಿಗದಿಯಾಗಿವೆ, ಬೇರೆಯವರಿಂದ ಪ್ರತಿಷ್ಠಾಪನೆ ಮಾಡಿಸಿಕೊಳ್ಳಿ ಅಂತ ಸಲಹೆಯನ್ನು ನೀಡಿದ್ದರು. ಅಧಿಕಾರಿ ಸುಮ್ಮನಿರಲ್ಲ ಅವಕಾಶ ಸಿಕ್ಕಾಗಲೆಲ್ಲಾ ಶ್ರೀಗಳಲ್ಲಿ ಮನವಿ ಮಾಡುತ್ತಿದ್ದರು. ಕೆಲ ದಿನಗಳ ನಂತರ ಪೇಜಾವರ ಶ್ರೀಗಳವರೇ ಸ್ವತಃ ಆಪ್ತ ಶಿಷ್ಯರಾದ ನರಸಿಂಗರಾವ್ ಅವರಿಗೆ ದೂರವಾಣಿ ಕರೆ ಮಾಡಿ ಪಾಷಾ ನಂಬರ್ ನೀಡಿ ಅವರ ಗ್ರಾಮಕ್ಕೆ ಹೋಗಬೇಕು ಅಂತ ತಿಳಿಸಿದ್ದರು. ಕೊನೆಗೆ ಶ್ರೀಗಳೆ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಇದನ್ನೂ ಓದಿ: ಹಿಂದೂ ಧರ್ಮ ಪರಿಚಾರಕ ಶ್ರೀಗಳಿಗೆ ಮುಸ್ಲಿಂ ಡ್ರೈವರ್! – ಆರಿಫ್‍ಗೆ ಕೊನೆಯಾಸೆ ಈಡೇರದ ನೋವು
Advertisement
Advertisement
ಶ್ರೀಗಳ ಆಪ್ತ ಶಿಷ್ಯರಾದ ನರಸಿಂಗರಾವ್ ದೇಶಪಾಂಡೆ ಮನೆ ಶ್ರೀಗಳಿಗಾಗಿಯೇ ಮೀಸಲಾಗಿತ್ತು. ಶ್ರೀಗಳ ಪೂಜೆ, ಉಳಿದುಕೊಳ್ಳಲು ಅನುಕೂಲಕರವಾದ ರೀತಿಯಲ್ಲಿಯೇ ಮನೆಯನ್ನ ಕಟ್ಟಿಸಲಾಗಿತ್ತು. ರಾಯಚೂರಿಗೆ ಬಂದಾಗಲೆಲ್ಲಾ ಶಿಷ್ಯ ನರಸಿಂಗರಾವ್ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದರು. ಉಡುಪಿಯ ಕೃಷ್ಣಮಠದ ಪರ್ಯಾಯ ಪೂರ್ವದಲ್ಲಿ ಜಿಲ್ಲೆಯಲ್ಲಿ ಪೇಜಾವರ ಶ್ರೀಗಳು ಕೈಗೊಳ್ಳುವ ಸಂಚಾರದ ಸಂದರ್ಭದಲ್ಲಿ ಭಕ್ತರಿಂದ ಪ್ರತಿ ವರ್ಷ 200 ಕ್ವಿಂಟಾಲ್ ದವಸ ಧಾನ್ಯವನ್ನು ಸಂಗ್ರಹಿಸಿ ನೀಡಲಾಗುತ್ತಿತ್ತು.
Advertisement
ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದಿಂದ ಡಿಸೆಂಬರ್ 14, 15 ಮತ್ತು 16 ರಂದು ನಡೆದ ಶ್ರೀಮನ್ಯಾಯಸುಧಾ ಮಂಗಳ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪೇಜಾವರ ಶ್ರೀವಿಶ್ವೇಶತೀರ್ಥರು ಜಿಲ್ಲೆಗೆ ಆಗಮಿಸಿರುವುದು ಕೊನೆ ಭೇಟಿಯಾಗಿದೆ. ನಂತರ ತಿರುಪತಿಗೆ ತೆರಳಿದರು ಅದಾದ ಬಳಿಕ ಅನಾರೋಗ್ಯಕ್ಕೀಡಾದರು. ರಾಯಚೂರಿನಲ್ಲಿ ನಡೆದ ಕಾರ್ಯಕ್ರಮವೇ ಶ್ರೀ ಕೊನೆಯ ಬಹಿರಂಗ ಕಾರ್ಯಕ್ರಮವೂ ಆಗಿದೆ.
ವಿದ್ಯಾರ್ಥಿ ವಸತಿ ನಿಲಯ ಆರಂಭ:
ರಾಯಚೂರಿನಲ್ಲಿ ಅಖಿಲ ಭಾರತ ವಿಶ್ವಮಧ್ವ ಮಹಾಮಂಡಳಿಯಿಂದ 1962ರಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಾಡಿಗೆ ಕಟ್ಟಡದಲ್ಲಿ ರಾಘವೇಂದ್ರ ವಿದ್ಯಾರ್ಥಿ ನಿಲಯವನ್ನು ಆರಂಭಿಸಿದ್ದರು. 1964ರಲ್ಲಿ ಎಲ್‍ವಿಡಿ ಕಾಲೇಜಿನ ಹತ್ತಿರದಲ್ಲಿ ಸ್ವಂತಕಟ್ಟಡದೊಂದಿಗೆ ರಾಘವೇಂದ್ರ ವಿದ್ಯಾರ್ಥಿ ನಿಲಯವನ್ನು ಆರಂಭಿಸಿದ್ದರು. ಅದು ಇಂದಿಗೂ ನಿರ್ವಹಣೆಯಾಗುತ್ತಿದೆ. ಈ ಮಹತ್ವದ ಕಾರ್ಯದಿಂದ ಹಲವಾರು ವಿದ್ಯಾರ್ಥಿಗಳು ಬದುಕು ಕಟ್ಟಿಕೊಂಡಿದ್ದಾರೆ.
1950ರ ನಂತರ ಪ್ರಥಮ ಬಾರಿಗೆ ಜಿಲ್ಲೆಯ ಮುದಗಲ್ ಪಟ್ಟಣಕ್ಕೆ ಪೇಜಾವರ ಶ್ರೀಗಳವರು ಭೇಟಿ ನೀಡಿದ್ದರು. ಅವರ ಗುರುಗಳಾದ ಶ್ರೀವಿದ್ಯಾಮಾನ್ಯ ತೀರ್ಥರು ಚಾತರ್ಮಾಸ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಮುದಗಲ್ ಗ್ರಾಮಕ್ಕೆ ನೋಡಬೇಕು ಎಂಬ ಆಪೇಕ್ಷೆಯಿಂದ ಬಂದಿದ್ದರಂತೆ. 1997ರಲ್ಲಿ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಎಸ್ ಪಾಟೀಲ್ ಅವರ ನೇತೃತ್ವದಲ್ಲಿ ಎಂ. ನಾಗಪ್ಪ, ಸೇರಿದಂತೆ ಅನೇಕರ ಗಣ್ಯರು ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರಿಗೆ ರಜತ ತುಲಾಭಾರ ನೆರವೇರಿಸಿದ್ದರು.
ಕಾರು ಪಲ್ಟಿಯಾಗಿ ಗಾಯಗೊಂಡಿದ್ದ ಶ್ರೀಗಳು:
1997 ರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಅದರಲ್ಲಿ ಪವಾಡ ರೀತಿಯಲ್ಲಿ ಪ್ರಾಣಾಪಾಯದಿಂದ ಶ್ರೀಗಳು ಪಾರಾಗಿದ್ದರು. ನಗರದಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮಗಳನ್ನ ಮುಗಿಸಿ ಕಾರಿನಲ್ಲಿ ಪೇಜಾವರ ಶ್ರೀಗಳು ತೆರಳುತ್ತಿದ್ದಾಗ ನಗರದ ಹೊರವಲಯದ ತುಂಟಾಪುರ ಗ್ರಾಮದ ಹತ್ತಿರ ಕಾರು ಪಲ್ಟಿಯಾಗಿ ಗಾಯಗೊಂಡಿದ್ದರು. ನಗರದ ವೈದ್ಯರಾದ ಡಾ.ರಾಘವೇಂದ್ರ ಕುಲಕರ್ಣಿ ಹಾಗೂ ಡಾ.ವಿ.ಜಿ ಕುಲಕರ್ಣಿ ಸ್ಥಳೀಯವಾಗಿ ಚಿಕಿತ್ಸೆ ನೀಡಿದ್ದರು. ನಂತರ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಜೆ.ಎಚ್ ಪಾಟೀಲ್ ಅವರ ಗಮನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಎಸ್ ಪಾಟೀಲ್ ತಂದು ಕೂಡಲೇ ಹೆಲಿಕಾಪ್ಟರ್ ಕಳುಹಿಸಲು ಮನವಿ ಮಾಡಿದ್ದರು. ಬಳಿಕ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಮೂಲಕ ಗುಣಮುಖರಾಗಿದ್ದರು.
ಜಿಲ್ಲೆಯಲ್ಲಿ ಜನಪ್ರತಿನಿಧಿಗಳು ಹಾಗೂ ಸಾಮಾನ್ಯರೊಂದಿಗೆ ಪೇಜಾವರ ಶ್ರೀಗಳು ಉತ್ತಮ ಬಾಂಧವ್ಯ ಹೊಂದಿದ್ದರು. ಉಡುಪಿಯ ಪೇಜಾವರ ಮಠದಿಂದ 2013 ರಲ್ಲಿ ತತ್ವಜ್ಞಾನ ಸಮ್ಮೇಳನ ಹಾಗೂ ವಿದ್ಯಾರ್ಥಿಗಳ ಸುಧಾಮಂಗಳ ಕಾರ್ಯಕ್ರಮವನ್ನು ರಾಯಚೂರು ನಗರದ ಯಾದವ್ ಸಮಾಜದ ಕೃಷ್ಣ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದರು. ಈ ಕಾರ್ಯಕ್ರಮಗಳು ಪೇಜಾವರಮಠದ ಶ್ರೀವಿಶ್ವೇಶತೀರ್ಥರ ಸಾನಿಧ್ಯದಲ್ಲಿ ನಡೆದವು.