ರಾಯಚೂರು ಗ್ರಾಮೀಣ ಭಾಗದಲ್ಲಿ ಮತದಾರರೇ ಕಾಣೆ!

Public TV
1 Min Read
RCR 2

ರಾಯಚೂರು: ಲೋಕಸಭಾ ಚುನಾವಣಾ ಕಣ ಎಲ್ಲೆಡೆ ರಂಗೇರುತ್ತಿದೆ. ಆದ್ರೆ ರಾಯಚೂರು ಗ್ರಾಮೀಣ ಭಾಗದಲ್ಲಿ ಮಾತ್ರ ಮತದಾರರೇ ಕಾಣೆಯಾಗಿದ್ದಾರೆ. ಮನೆಗಳಿಗೆ ಬೀಗ ಜಡಿದು ಹೊಟ್ಟೆಪಾಡಿಗಾಗಿ ಊರುಗಳನ್ನೇ ತೊರೆದಿದ್ದಾರೆ. ಹಣ, ಬಸ್ ಚಾರ್ಜ್ ಕೊಟ್ರೆ ಮಾತ್ರ ಗುಳೆ ಹೋದವರು ಮತಹಾಕಲು ಬಂದರೂ ಬರಬಹುದು ಎಂದು ಗ್ರಾಮಗಳಲ್ಲಿ ಉಳಿದ ಜನ ಹೇಳುತ್ತಿದ್ದಾರೆ.

RCR 1 e1553581501747

ಬಿಸಿಲನಾಡು ರಾಯಚೂರು ಈ ಬಾರಿ ಭೀಕರ ಬರಗಾಲಕ್ಕೆ ತತ್ತರಿಸಿ ಹೋಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಜನ ಮನೆಗಳಿಗೆ ಬೀಗ ಜಡಿದು ಬೆಂಗಳೂರು, ಪುಣೆ, ಹೈದ್ರಾಬಾದ್ ಕಡೆ ಗುಳೆ ಹೋಗಿದ್ದಾರೆ. ಸಂಸದರ ಆದರ್ಶ ಗ್ರಾಮ ಜಾಗೀರ್ ವೆಂಕಟಾಪುರ ಸೇರಿದಂತೆ ರಾಯಚೂರು, ದೇವದುರ್ಗ, ಲಿಂಗಸುಗೂರು ತಾಲೂಕುಗಳಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ಗುಳೆ ಹೋಗಿದ್ದು ಮತ ಹಾಕುವವರೇ ಇಲ್ಲದಂತಾಗಿದೆ. ರಾಯಚೂರಿನ ಗೋನಾಳ ಗ್ರಾಮವೊಂದರಲ್ಲೆ ಸುಮಾರು 1200 ಮತದಾರರಲ್ಲಿ ಅರ್ಧದಷ್ಟು ಜನ ಗುಳೆ ಹೋಗಿದ್ದಾರೆ ಎಂದು ಕೂಲಿ ಕಾರ್ಮಿಕ ಸಂಘದ ಮುಖಂಡ ಗುರುರಾಜ್ ಹೇಳಿದ್ದಾರೆ.

RCR 4 e1553581372461

ಗ್ರಾಮಗಳಲ್ಲಿ ಕೇವಲ ವಯೋವೃದ್ಧರನ್ನ ಮನೆಕಾಯಲು ಬಿಟ್ಟುಹೋಗಿದ್ದಾರೆ. ಇನ್ನೂ ಕೆಲವರು ಮಕ್ಕಳ ಪರೀಕ್ಷೆಗಳು ಮುಗಿಯುವುದನ್ನ ಕಾಯುತ್ತಿದ್ದಾರೆ. ಚುನಾವಣೆ ಮತದಾನ ಸಂದರ್ಭದಲ್ಲಿ ಅಭ್ಯರ್ಥಿಗಳು ದುಡ್ಡು ಕೊಟ್ಟು ವಾಹನ ವ್ಯವಸ್ಥೆ ಮಾಡಿದರೆ ಮಾತ್ರ ಗುಳೆ ಹೋದವರು ಮತ ಹಾಕಲು ಬರುತ್ತಾರೆ ಎಂದು ಅಲ್ಲಿನ ಗ್ರಾಮಸ್ಥರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಹೊಟ್ಟೆಪಾಡಿಗಾಗಿ ದುಡಿಯಲು ದೂರದ ಊರುಗಳಿಗೆ ತೆರಳಿದವರು ತಮ್ಮ ಹಕ್ಕನ್ನು ಚಲಾಯಿಸುವ ಅವಕಾಶವನ್ನೇ ಕಳೆದುಕೊಳ್ಳುತ್ತಿದ್ದಾರೆ. ಮತದಾನ ಪ್ರಮಾಣ ಹೆಚ್ಚು ಮಾಡಲು ಚುನಾವಣಾ ಅಧಿಕಾರಿಗಳು ಏನೆಲ್ಲಾ ಕಸರತ್ತು ನಡೆಸಿದ್ರೂ ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನ ತಡೆಯಲು ಮಾತ್ರ ಆಗುತ್ತಿಲ್ಲ.

RCR 5

Share This Article
Leave a Comment

Leave a Reply

Your email address will not be published. Required fields are marked *