ರಾಯಚೂರು: ವಿದ್ಯಾರ್ಥಿಗಳ ಜಗಳಕ್ಕೆ ಪಂಚಾಯತಿ ಮಾಡಿ ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತರೊಂದಿಗೆ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿ ಮೇಲೆ ವಿದ್ಯಾರ್ಥಿಯಿಂದ ಹಲ್ಲೆಯಾಗಿದೆ.
ಕಾಲೇಜಿನ ಬಿಸಿಎ ವಿದ್ಯಾರ್ಥಿ ರಂಜಿತ್ ಕುಮಾರ್ ಇನ್ನೋರ್ವ ಬಿಎ ವಿದ್ಯಾರ್ಥಿ ಆಂಜಿನೇಯನ ಮೇಲೆ ತನ್ನ ಸ್ನೇಹಿತರೊಂದಿಗೆ ಕಾಲೇಜು ಬಳಿ ಹಲ್ಲೆ ಮಾಡಿದ್ದನು. ಈ ಘಟನೆ ಹಿನ್ನೆಲೆ ಕಾಲೇಜಿನ ಉಪನ್ಯಾಸಕರು ರಂಜಿತ್‍ನನ್ನ ಕರೆದು ತಿಳಿ ಹೇಳಿದ್ದರು. ಆ ವೇಳೆಯೂ ತನ್ನ ಸ್ನೇಹಿತರನ್ನ ಕರೆದುಕೊಂಡು ಬಂದಿದ್ದ ರಂಜಿತ್ ಉಪನ್ಯಾಸಕರ ಮಾತಿಗೂ ಬೆಲೆಕೊಟ್ಟಿರಲಿಲ್ಲ. ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿ ರಂಜಿತ್ ವರ್ತನೆಯನ್ನ ಖಂಡಿಸಿ ಬೈದಿದ್ದರು. ಇದೇ ಸಿಟ್ಟನ್ನ ಇಟ್ಟುಕೊಂಡು ಕೃಷಿ ವಿವಿ ಹತ್ತಿರ ಬುಲೆಟ್ ನಲ್ಲಿ ಕಾಲೇಜಿಗೆ ಬರುತ್ತಿದ್ದ ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿಯನ್ನ ತಡೆದು ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ.
Advertisement
Advertisement
ಘಟನೆ ಹಿನ್ನೆಲೆ ರಂಜಿತ್ ಸೇರಿ ಆರು ಜನರ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡು ಪ್ರಜ್ಞೆತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಉಪನ್ಯಾಸಕ ಪ್ರಾಣೇಶ್ ನನ್ನ ಕಂಡು ಅವರ ಹಳೆಯ ವಿದ್ಯಾರ್ಥಿ ಸಮೀರ್ ಪಾಶಾ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಉಪನ್ಯಾಸಕ ಪ್ರಾಣೇಶ್ ಚೇತರಿಸಿಕೊಂಡಿದ್ದಾರೆ.
Advertisement
Advertisement
ಈ ಹಿಂದೆ ವಿದ್ಯಾರ್ಥಿ ರಂಜಿತ್ ಕಾಲೇಜು ಶುಲ್ಕ ಕಟ್ಟದಿದ್ದಾಗ ಪ್ರಾಣೇಶ್ ಸ್ವತಃ ಶುಲ್ಕ ಕಟ್ಟಿ ಪರೀಕ್ಷೆ ಬರೆಯಲು ಅನುಮಾಡಿಕೊಟ್ಟಿದ್ದರಂತೆ. ಆದ್ರೆ ಅದೇ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ್ದಾನೆ. ಅದೃಷ್ಟವಶಾತ್ ಬಸ್ ನಲ್ಲಿ ರಾಯಚೂರಿಗೆ ಬರುತ್ತಿದ್ದ ಹಳೆಯ ವಿದ್ಯಾರ್ಥಿ ಸಮೀರ್ ಪಾಶಾ ಕೂಡಲೇ ಬಸ್ ಇಳಿದು ಪ್ರಜ್ಞೆತಪ್ಪಿ ಬಿದ್ದಿದ್ದ ಉಪನ್ಯಾಸಕರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ.