Connect with us

ದಾಳಿಂಬೆಗೆ ವರವಾಯ್ತು ಸೀರೆ!: ರಾಯಚೂರು ರೈತರ ಪ್ರಯೋಗ ಯಶಸ್ವಿ

ದಾಳಿಂಬೆಗೆ ವರವಾಯ್ತು ಸೀರೆ!: ರಾಯಚೂರು ರೈತರ ಪ್ರಯೋಗ ಯಶಸ್ವಿ

ರಾಯಚೂರು: ಹೆಣ್ಣಿಗೆ ಮಾತ್ರ ಸೀರೆ ಬೇಕು ಅನ್ನೋದನ್ನು ರಾಯಚೂರಿನ ರೈತರು ಸುಳ್ಳು ಮಾಡಿದ್ದಾರೆ. ಹಣ್ಣಿಗೂ ಸೀರೆ ಬೇಕು ಅಂತಾ ತಮ್ಮದೇ ಆದ ಕೃಷಿ ಪದ್ಧತಿಯಲ್ಲಿ ಸೀರೆ ಬಳಸಿ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆ. ಹೀಗಾಗಿ ಹಳೆಯ ಸೀರೆಗಳಿಗೆ ರಾಯಚೂರಿನಲ್ಲಿ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ.

ಕೃಷಿಯಲ್ಲಿ ನೀವು ನಾನಾ ಬಗೆಗಳನ್ನ ಕೇಳಿರಬಹುದು. ಸಾವಯವ, ಸಹಜ ಕೃಷಿ, ಸಮಗ್ರ ಬೇಸಾಯ, ಸಾಂದ್ರೀಕೃತ ಬೇಸಾಯ ಅಂತ ಕೃಷಿ ಪದ್ಧತಿಗಳಿವೆ. ಆದ್ರೆ ರಾಯಚೂರು ಜಿಲ್ಲೆಯಲ್ಲಿ ರೈತರು ಸೀರೆಗಳಿಂದ ದಾಳಿಂಬೆ ಬೆಳೆ ಬೆಳೆಯುತ್ತಿದ್ದಾರೆ. ಒಂದೊಂದು ದಾಳಿಂಬೆ ಗಿಡಕ್ಕೆ ಒಂದರಿಂದ ಮೂರು ಸೀರೆಗಳನ್ನು ಸುತ್ತಿ ಬೇಸಾಯ ಮಾಡುತ್ತಿದ್ದಾರೆ. ಇದರಿಂದ ರುಚಿಯಾದ, ಗಾತ್ರದಲ್ಲೂ ದೊಡ್ಡದಾದ ದಾಳಿಂಬೆಯ ಹೆಚ್ಚು ಇಳುವರಿಯನ್ನ ಪಡೆದು ಲಾಭ ಗಳಿಸುತ್ತಿದ್ದಾರೆ. ಈ ರೀತಿ ಬೆಳೆದ ದಾಳಿಂಬೆಗೆ ಮಾರುಕಟ್ಟೆಯಲ್ಲೂ ಹೆಚ್ಚಿನ ಬೇಡಿಕೆಯಿದೆ. ಸೀರೆ ಕಟ್ಟುವುದರಿಂದ ರೈತರು ನಾನಾ ಲಾಭಗಳನ್ನ ಪಡೆಯುತ್ತಿದ್ದಾರೆ.

ಸೀರೆಯ ಲಾಭ ಹೇಗೆ?: ಸೂರ್ಯನ ಬಿಸಿಲಿನಿಂದ ಉಂಟಾಗುವ ಸನ್ ಬರ್ನ್‍ನಿಂದ ಕಾಯಿಗಳು ಕಪ್ಪಾಗುತ್ತವೆ. ಹಲವಾರು ಬಗೆಯ ಕೀಟಗಳು ಪದೇ ಪದೇ ದಾಳಿಯಿಡುವುದು, ಗಿಳಿ, ಕೋತಿಗಳ ಕಾಟದಿಂದ ದಾಳಿಂಬೆ ಹಾಳಾಗುತ್ತದೆ. ದುಂಡಾಣು ರೋಗ ಬಂದರಂತೂ ರೈತ ನಷ್ಟ ಅನುಭವಿಸುವುದು ನಿಶ್ಚಿತ. ಆದ್ರೆ ಸೀರೆ ಬಳಸುವುದರಿಂದ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೆ ಸೀರೆಗಳೇ ಕೀಟಗಳನ್ನು ಬಹುಪಾಲು ತಡೆಯುವುದರಿಂದ ಕ್ರಿಮಿ ಕೀಟನಾಶಕಗಳ ಬಳಕೆ ಕೂಡ ಕಡಿಮೆಯಾಗಿ ಇಳುವರಿ ಹೆಚ್ಚಾಗುತ್ತದೆ.

ಈ ಹಿಂದೆಯಲ್ಲಾ ದಾಳಿಂಬೆ ಬೆಳೆದು ಕೈಸುಟ್ಟುಕೊಂಡ ರೈತರು ಈಗ ಸೀರೆಯನ್ನ ನಂಬಿ ಪುನಃ ದಾಳಿಂಬೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ 50 ಸಾವಿರ ಎಕರೆಯಷ್ಟು ಪ್ರದೇಶದಲ್ಲಿ ದಾಳಿಂಬೆ ಬೆಳೆಯಲಾಗಿದೆ. ಆದ್ರೆ ಸೀರೆ ಖರೀದಿಗೆ ಹೆಚ್ಚು ಖರ್ಚು ಬರುತ್ತಿದ್ದು ಕೃಷಿ ಇಲಾಖೆ ಸಹಾಯ ಮಾಡಬೇಕು ಅನ್ನೋದು ರೈತರ ಆಶಯ.

Advertisement
Advertisement