Connect with us

Districts

ದಿನಕ್ಕೆ ಕನಿಷ್ಠ 25 ಲೀಟರ್ ಹಾಲು ಕೊಡುವ ಜಾಫರಬಾದಿ, ಮುರ‌್ರಾ ಎಮ್ಮೆ

Published

on

– ಹಾಲಿನಿಂದ ರೈತನ ಬೊಕ್ಕಸಕ್ಕೆ ಸ್ಥಿರ ಆದಾಯ
– ಒಂದು ಎಮ್ಮೆಯಿಂದ ವಾರ್ಷಿಕ ಒಂದೂವರೆ ಲಕ್ಷ ರೂ. ಆದಾಯ

ರಾಯಚೂರು: ರೈತರ ಕೈ ಹಿಡಿದರೆ ಹೈನುಗಾರಿಕೆ ಲಾಭದಾಯಕ ಆದರೆ ನಿರ್ವಹಣೆ ಕೊರತೆಯಿಂದ ಕೈಸುಟ್ಟುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಬೇಸಾಯದ ಜೊತೆ ಉಪ ಕಸುಬಾಗಿ ಹೈನುಗಾರಿಕೆ ಮಾಡಬೇಕೆನ್ನುವ ರೈತರ ಉತ್ತಮ ಆಯ್ಕೆ ಅಂದರೆ ಜಾಫರಬಾದಿ, ಮುರ‌್ರಾ ತಳಿಯ ಎಮ್ಮೆ. ಮಾನ್ವಿ ತಾಲೂಕಿನ ಕೊರವಿ ಗ್ರಾಮದ ರೈತ ಜನಾರ್ದನ ಅವರು ಮುರ‌್ರಾ, ಜಾಫರಬಾದಿ ತಳಿಗಳ ಎಮ್ಮೆಗಳನ್ನು ಸಾಕುವ ಮೂಲಕ ಭರ್ಜರಿ ಲಾಭದ ಸವಿ ಉಣುತ್ತಿದ್ದಾರೆ.

ಈ ಬಾರಿಯ ರಾಯಚೂರು ಕೃಷಿ ವಿವಿಯ ಆಕರ್ಷಣೆಗಳಲ್ಲಿ ಒಂದಾದ ಜಾಫರಬಾದಿ, ಮುರ‌್ರಾ ತಳಿಯ ಎಮ್ಮೆಗಳು ರೈತರ ಪಾಲಿನ ಆದಾಯದ ದಾರಿಯೂ ಹೌದು. ರೈತ ಜನಾರ್ದನ ಅವರು ಕಳೆದ 20 ವರ್ಷಗಳಿಂದ ಈ ಎಮ್ಮೆಗಳ ಹೈನುಗಾರಿಕೆಯಲ್ಲಿ ತೊಡಗಿದ್ದು, ಭಾರೀ ಗಾತ್ರದ ಈ ಎಮ್ಮೆಗಳನ್ನು ಹೆಮ್ಮೆಯಿಂದ ಸಾಕಿಕೊಂಡಿದ್ದಾರೆ. ಜಾಫರಬಾದಿ ತಳಿಗಳು ಕನಿಷ್ಠ 20 ಸೂಲುಗಳನ್ನು ನೀಡುತ್ತಿದ್ದು, ರೈತರಿಗೆ ಇದರಿಂದ ನಷ್ಟದ ಮಾತೇ ಇಲ್ಲ. ಆದರೆ, ನಿರ್ವಹಣೆ ಕೂಡ ಅಷ್ಟೇ ಪ್ರಮಾಣದ್ದಾಗಿರುತ್ತದೆ. ಹೀಗಾಗಿ ಶ್ರದ್ಧೆಯಿಂದ ದುಡಿದರೆ ಲಾಭ ಕಟ್ಟಿಟ್ಟ ಬುತ್ತಿ ಎಂದು ಜನಾರ್ದನ ಅವರು ಹೇಳುತ್ತಾರೆ.

ಈ ತಳಿಯ ಎಮ್ಮೆಗಳು ನಿತ್ಯ ಕನಿಷ್ಠ 25 ಲೀಟರ್ ಹಾಲು ನೀಡುತ್ತದೆ. ಕರುಗಳು ಸೇರಿ 20 ಎಮ್ಮೆಗಳನ್ನು ಸಾಕಿರುವ ಜನಾರ್ದನ ಅವರು ಪ್ರತಿನಿತ್ಯ ಏನಿಲ್ಲವೆಂದರೂ 120 ಲೀಟರ್ ಗಿಂತ ಅಧಿಕ ಹಾಲು ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿರುವ ಡೈರಿಗೆ ಹಾಲು ಸರಬರಾಜು ಮಾಡುತ್ತಾರೆ. ಆದ್ದರಿಂದ ವರ್ಷಕ್ಕೆ ಏನಿಲ್ಲವೆಂದರೂ ಒಂದು ಎಮ್ಮೆಯಿಂದ ಒಂದೂವರೆ ಲಕ್ಷ ರೂ. ಆದಾಯ ಬರುತ್ತಿದೆ.

ಜಾಫರಬಾದಿ, ಮುರ‌್ರಾ ತಳಿಯ ಎಮ್ಮೆಗಳು ನೋಡಲು ಭಾರೀ ಗಾತ್ರದಲ್ಲಿರುತ್ತವೆ. ಸಾಮಾನ್ಯ ಎಮ್ಮೆಗಳಂತಿರದೆ ತುಸು ಭಿನ್ನವಾಗಿ, ದೊಡ್ಡದಾಗಿ ಕಾಣಿಸುತ್ತವೆ. ಅವುಗಳ ಗಾತ್ರಕ್ಕೆ ತಕ್ಕಂತೆ ಆಹಾರ ಕೂಡ ಹೆಚ್ಚಾಗಿಯೇ ಬೇಕು. ಈ ಎಮ್ಮೆಗಳಿಗಾಗಿ ಜನಾರ್ದನ ಅವರು ಮೂರು ಎಕರೆ ಪ್ರದೇಶದಲ್ಲಿ ಹುಲ್ಲು ಬೆಳೆಸುತ್ತಿದ್ದಾರೆ. ಎಮ್ಮೆಗಳು ಹೆಚ್ಚು ತಿಂದಷ್ಟು ಹಾಲು ಉತ್ಪಾದನೆ ಜಾಸ್ತಿ ಎನ್ನುವ ಕಾರಣಕ್ಕೆ ಉತ್ತಮವಾಗಿ ಮೇಯಿಸಲಾಗುತ್ತದೆ. ಒಂದು ಎಮ್ಮೆಗೆ ಏನಿಲ್ಲವೆಂದರೂ ದಿನಕ್ಕೆ 10 ಕೆ.ಜಿ ಆಹಾರ ಬೇಕು. ಒಣ ಹುಲ್ಲಿನ ಜೊತೆಗೆ ಹತ್ತಿ ಕಾಳು, ಗೋಧಿ ಹೊಟ್ಟು, ಸಜ್ಜೆ ಕುದಿಸಿ ತಿನ್ನಿಸಲಾಗುತ್ತದೆ. ಹೀಗಾಗಿ ಅವುಗಳ ನಿರ್ವಹಣೆ ಕೂಡ ತುಸು ದುಬಾರಿಯೇ ಇದೆ.

ಎಲ್ಲಿಯೇ ಎಮ್ಮೆಗಳ ಪ್ರದರ್ಶನವಿದ್ದರೂ ಈ ತಳಿಯ ಎಮ್ಮೆಗಳೇ ಹೆಚ್ಚಾಗಿ ಪ್ರಶಸ್ತಿಯನ್ನು ಬಾಚುತ್ತವೆ. ಈಗಾಗಲೇ ಆಂಧ್ರ, ಸಿಂಧನೂರಿನಲ್ಲಿ ನಡೆದ ಪ್ರದರ್ಶನಗಳಲ್ಲಿ ಜನಾರ್ದನ ಸಾಕಿರುವ ಎಮ್ಮೆಗಳು ಪ್ರಶಸ್ತಿಯನ್ನು ಬಾಚಿಕೊಂಡಿವೆ.

ಜಾಫರಬಾದಿ ಹಾಗೂ ಮುರ‌್ರಾ ತಳಿಗಳು ನೋಡಲು ಒಂದೆ ತರಹವಿದ್ದರೂ ಕೋಡುಗಳು ಭಿನ್ನವಾಗಿರುತ್ತವೆ. ಜಾಫರಬಾದಿ ಎಮ್ಮೆಗೆ ಮುರ‌್ರಾ ಕೋಣದಿಂದ ಕ್ರಾಸ್ ಮಾಡಿದ್ದರಿಂದ ಸಾಕಷ್ಟು ಎಮ್ಮೆಗಳು ಜನಿಸಿದ್ದು, ಒಂದು ವರ್ಷದ ಎಮ್ಮೆ ಕರು ಮಾರಾಟ ಮಾಡಿದರೆ 30 ರಿಂದ 40 ಸಾವಿರ ರೂ. ಬೆಲೆ ಸಿಗುತ್ತದೆ. ಅಲ್ಲದೇ ಐದಾರು ಸೂಲು ಹಾಕಿದ ಎಮ್ಮೆಗಳಾದರೆ ಏನಿಲ್ಲವೆಂದರೂ 10 ರಿಂದ 15 ಲಕ್ಷ ರೂ. ದರಕ್ಕೆ ಮಾರಾಟವಾಗುತ್ತವೆ. ಆಂಧ್ರ ಪ್ರದೇಶ, ತೆಲಂಗಾಣದ ಭಾಗದ ರೈತರು ಹೆಚ್ಚಾಗಿ ಬಂದು ಈ ಎಮ್ಮೆಗಳನ್ನ ಖರೀದಿಸುತ್ತಾರೆ. ಈ ಎಮ್ಮೆಗಳು ಹೆಚ್ಚು ಸೂಲುಗಳನ್ನು ಹಾಕುವುದರಿಂದ ಬೇಡಿಕೆಯೂ ಹೆಚ್ಚಾಗಿರುತ್ತದೆ. ಈ ಎಮ್ಮೆಗಳ ಸಾಕಾಣಿಕೆ ಕುರಿತು ಮಾಹಿತಿ ಬೇಕಾದವರು ಜನಾರ್ದನ ಅವರ 88847 06576 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು.

Click to comment

Leave a Reply

Your email address will not be published. Required fields are marked *