ರಾಯಚೂರು: ನಗರದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅತ್ಯಾಚಾರ, ಕೊಲೆ ಪ್ರಕರಣದ ತನಿಖೆ ಸಿಐಡಿ ಅಂಗಳದಲ್ಲಿದ್ದು, ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ರಾಯಚೂರಿಗೆ ಇಂದು ಭೇಟಿ ನೀಡಿದ ಸಿಐಡಿ ಅಧಿಕಾರಿಗಳು ಪ್ರಕರಣದ ಮಾಹಿತಿ ಪಡೆದು ಘಟನಾ ಸ್ಥಳ ಪರಿಶೀಲನೆ ನಡೆಸಿದರು. ಸಿಐಡಿ ಡಿವೈಎಸ್ ಪಿ ರವಿಶಂಕರ್, ಸಿಪಿಐ ದೀಲಿಪ್ ಕುಮಾರ್ ಸೇರಿ ನಾಲ್ಕು ಜನ ಸಿಬ್ಬಂದಿ ರಾಯಚೂರಿನಲ್ಲಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಯುವತಿ ಶವ ಪತ್ತೆಯಾದ ನಗರದ ಮಾಣಿಕ್ ಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದಲ್ಲಿ ಸುಮಾರು 15 ನಿಮಿಷಗಳ ಕಾಲ ಪರಿಶೀಲನೆ ನಡೆಸಿದರು. ಬಳಿಕ ರಾಯಚೂರು ಡಿವೈಎಸ್ಪಿ ಕಚೇರಿಗೆ ತೆರಳಿ ತನಿಖೆ ಮುಂದುವರಿಸಿದ್ದಾರೆ. ಸಿಐಡಿ ಎಸ್ ಪಿ ಶರಣಪ್ಪ ನೇತೃತ್ವದಲ್ಲಿ ನಾಳೆಯೂ ತನಿಖೆ ನಡೆಯಲಿದ್ದು, ಸಿಐಡಿ ತನಿಖಾ ತಂಡ ರಾಯಚೂರಿನಲ್ಲೇ ಬೀಡು ಬಿಡಲಿದೆ. ನಾಳೆ ಮೃತ ವಿದ್ಯಾರ್ಥಿನಿ ಪೋಷಕರ ಹೇಳಿಕೆ ಪಡೆಯಲಿದ್ದಾರೆ.
ಏನಿದು ಪ್ರಕರಣ?
ಏಪ್ರಿಲ್ 16 ರಂದು ಮೃತ ವಿದ್ಯಾರ್ಥಿನಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಪೊಲೀಸರು ಡೆತ್‍ನೋಟ್ ನೋಡಿ ಇದು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಬಳಿಕ ಮೃತ ವಿದ್ಯಾರ್ಥಿನಿಯ ತಾಯಿ ಇದು ಕೊಲೆಯಲ್ಲ. ನನ್ನ ಮಗಳನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಸದ್ಯಕ್ಕೆ ಪೊಲೀಸರು ಮೃತ ವಿದ್ಯಾರ್ಥಿನಿಯ ಗೆಳೆಯ ಸುದರ್ಶನ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದರು. ಆ ಬಳಿಕ ಪ್ರಕರಣದ ನಿಷ್ಪಕ್ಷಪಾತ ತನಿಖೆಗೆ ಆಗ್ರಹ ಕೇಳಿ ಬಂದ ಕಾರಣದಿಂದ ಡಿಜಿಪಿ ನೀಲಮಣಿ ರಾಜು ಅವರು ಪ್ರಕರಣವನ್ನು ಸಿಐಡಿ ಎಸ್‍ಪಿ ಶರಣಪ್ಪ, ಅನೂಪ್ ಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ನೀಡಿದ್ದರು.