ರಾಯಚೂರು: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ಶುಕ್ರವಾರ (ಫೆ.13) ನಗರದ ಹೊರವಲಯದ ಯರಮರಸ್ ಬಳಿಯ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಒಟ್ಟು 322 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ವಿಮಾನ ನಿಲ್ದಾಣ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಯು ಈಗಾಗಲೇ ಶೇ.31ರಷ್ಟು ಪೂರ್ಣವಾಗಿದೆ. ಬರುವ ಎರಡೂವರೆ ತಿಂಗಳಲ್ಲಿ ರನ್ ವೇ ಕಾಮಗಾರಿಯು ಪೂರ್ಣವಾಗಲಿದೆ. ಈ ವರ್ಷದಲ್ಲಿ ಮಳೆ ನಿರಂತರವಾಗಿ ಸುರಿದ ಕಾರಣ ರನ್ ವೇ ಕಾಮಗಾರಿಯು ಮಂದಗತಿಯಲ್ಲಿ ಸಾಗಿತ್ತು. ಮುಂದಿನ ಒಂದೂವರೆ ವರ್ಷದ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಉತ್ತಮ ಸಂಬಂಧಕ್ಕಾಗಿ ಟಿಬೆಟ್ ಚೀನಾದ ಭಾಗವೆಂದು ಭಾವಿಸಿ ನೆಹರು ಸಹಿ ಹಾಕಿದ್ದರು: ಸಿಡಿಎಸ್ ಅನಿಲ್ ಚೌಹಾಣ್
ಏಗನೂರು ಗ್ರಾಮದಲ್ಲಿ 30 ಮನೆಗಳು ಬೇರೆಡೆಗೆ ಶಿಫ್ಟ್ ಮಾಡಲು ಮೂರು ಎಕರೆ ಜಮೀನು ಹಾಗೂ ದಂಡ್ ಗ್ರಾಮದಲ್ಲಿನ 108 ಮನೆಗಳು ಶಿಫ್ಟ್ ಮಾಡಲು ಆರು ಎಕರೆ ಜಮೀನಿನಲ್ಲಿ ಲೇಔಟ್ ಕಾರ್ಯ ನಡೆಯುತ್ತಿದೆ. ವಿಮಾನ ನಿಲ್ದಾಣ ಕಾಮಗಾರಿ ಹಿನ್ನೆಲೆ ಬೇರೆಡೆಗೆ ಸ್ಥಳಾಂತರವಾಗುವ ಎರಡು ಗ್ರಾಮಗಳಲ್ಲಿನ ಗ್ರಾಮಸ್ಥರಿಗೆ ಪರಿಹಾರವನ್ನು ನೀಡಲಾಗಿದೆ ಎಂದರು.

