ರಾಯಚೂರು/ಯಾದಗಿರಿ: ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಬೇಸತ್ತು ಪೊಲೀಸರೇ ಖುದ್ದು ರಸ್ತೆ ಗುಂಡಿಗಳನ್ನು ಮುಚ್ಚಿ ಕರ್ತವ್ಯದ ಜೊತೆಗೆ ಸಾಮಾಜಿಕ ಕಳಕಳಿ ಮೆರೆದ ಘಟನೆ ರಾಯಚೂರಿನಲ್ಲಿ ನಡೆದಿದೆ.
ನಗರದ ಗಂಜ್ ಬಳಿಯ ಆರ್ ಡಿಸಿಸಿ ಬ್ಯಾಂಕ್ ಮುಂಭಾಗದ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದು ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದರು. ರಸ್ತೆಯಲ್ಲಿ ಮಾರುದ್ದ ಗುಂಡಿ ಬಿದ್ದು ತಿಂಗಳುಗಳೇ ಕಳೆದಿದ್ದರೂ ನಗರಸಭೆ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಗುಂಡಿಗಳನ್ನು ಮುಚ್ಚುವಂತೆ ಸಾರ್ವಜನಿಕರು, ಪೊಲೀಸರು ಹಲವು ಬಾರಿ ಮನವಿ ಮಾಡಿದರು ತಲೆಕೆಡಿಸಿಕೊಂಡಿರಲಿಲ್ಲ. ಹೀಗಾಗಿ ಟ್ರಾಫಿಕ್ ಪೊಲೀಸರೇ ಖುದ್ದು ಜೆಸಿಬಿ ಬಳಸಿಕೊಂಡು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
Advertisement
Advertisement
ಇತ್ತ ಯಾದಗಿರಿಯ ಸುರಪುರದಲ್ಲಿಯೂ ನಗರಸಭೆಯ ನಿರ್ಲಕ್ಷ್ಯಕ್ಕೆ ಬೇಸತ್ತು ಸೋಮವಾರ ಸ್ವತಃ ಸಿಪಿಐ, ಪಿಎಸ್‍ಐ ಮತ್ತು ಪೊಲೀಸ್ ಪೇದೆಗಳು ಸಲಿಕೆ, ಗುದ್ದಲಿ ಹಿಡಿದು, ನಗರದ ಮುಖ್ಯ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿದ್ದರು. ಇತ್ತೀಚೆಗೆ ಸುರಿದ ಮಳೆಯಿಂದ ಸುರಪುರ ನಗರದ ಮುಖ್ಯ ರಸ್ತೆಯಲ್ಲಿ ಹಲವಾರು ತಗ್ಗು-ದಿನ್ನಿಗಳು ಬಿದ್ದು, ಸಾಕಷ್ಟು ಅಪಘಾತಗಳು ಸಂಭವಿಸಿವೆ. ಹೀಗಾಗಿ ಆದಷ್ಟು ಬೇಗ ನಗರದಲ್ಲೆಡೆ ಇರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ನಗರಸಭೆಗೆ ಪೊಲೀಸರು ಮನವಿ ಮಾಡಿದರು.
Advertisement
Advertisement
ಪೊಲೀಸ್ ಅಧಿಕಾರಿಗಳ ಮನವಿಗೆ ನಗರಸಭೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಇದರಿಂದ ಬೇಸರಗೊಂಡ ಸಿಪಿಐ ಆನಂದರಾವ್ ಮತ್ತು ಪಿಎಸ್‍ಐಗಳಾದ ಸೋಮಲಿಂಗಪ್ಪ, ಶರಣಪ್ಪ ತಮ್ಮ ಸ್ವಂತ ಖರ್ಚಿನಲ್ಲಿ ಸಿಮೆಂಟ್, ಕಂಕರ್ ಮತ್ತು ಮಣ್ಣು ಖರೀದಿ ಸ್ವತಃ ತಾವೇ ಸಲಿಕೆ, ಗುದ್ದಲಿ ಹಿಡಿದು, ಸಾರ್ವಜನಿಕರ ಸುರಕ್ಷಿತೆ ದೃಷ್ಟಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.