ರಾಯಚೂರು: ಸಾಧು ವೇಷಧರಿಸಿ ಬಂದ ವ್ಯಕ್ತಿಯೋರ್ವನ ಮಾತಿಗೆ ಮರುಳಾಗಿ ಗೃಹಿಣಿಯೊಬ್ಬಳು 40 ಗ್ರಾಂ ಚಿನ್ನ ಕಳೆದುಕೊಂಡಿರುವ ಘಟನೆ ನಗರದ ಮಕ್ತಲ್ ಪೇಟೆಯಲ್ಲಿ ನಡೆದಿದೆ.
ಪತಿಗೆ ಒಳ್ಳೆಯದಾಗಲಿ ಎಂದು ಸಾಧುವಿನ ಮಾತು ಕೇಳಿ ಮಹಿಳೆ ಪೂಜೆ ಮಾಡಿಸಿದ್ದಾಳೆ. ಆದರೆ ಪೂಜೆಯ ಬಳಿಕ ಚಿನ್ನದ ಸರ ಕದ್ದು ಸಾಧು ವೇಷಧಾರಿ ಪರಾರಿಯಾಗಿದ್ದಾನೆ. ಖದೀಮನ ಮಾತು ಕೇಳಿ ತನ್ನಲ್ಲಿ ಚಿನ್ನಾಭರಣ ಇಲ್ಲದಿದ್ದರೂ ಪಕ್ಕದಮನೆಯವರ ಚಿನ್ನದ ಸರ ತಂದು ಪೂಜೆಗೆ ಇಟ್ಟು ಮೋಸಹೋಗಿದ್ದಾಳೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಸಾಧು ವೇಷಧಾರಿ ಖದೀಮನ ಪತ್ತೆಗೆ ಬಲೆ ಬೀಸಿದ್ದು, ಆರೋಪಿಯ ರೇಖಾಚಿತ್ರ ಬಿಡುಗಡೆ ಮಾಡಿದೆ.
Advertisement
Advertisement
ನಡೆದಿದ್ದೇನು?:
ಆಗಸ್ಟ್ 28 ರಂದು ಮಧ್ಯಾಹ್ನ ಗೃಹಿಣಿ ಪದ್ಮ ರಮೇಶ್ ಮನೆಗೆ ಇಬ್ಬರು ಮಹಿಳೆಯರು ಬಂದು ನಾವು ಆಂಧ್ರದ ವೀರಬ್ರಹ್ಮಯ್ಯ ಮಠದಿಂದ ಬಂದಿದ್ದೇವೆ ವೆಂಕಟೇಶ್ ಸಾಧು ಅವರನ್ನು ಹುಡುಕುತ್ತಿದ್ದೇವೆ. ಒಂದು ವೇಳೆ ಅವರು ನಿಮ್ಮಲ್ಲಿಗೆ ಬಂದರೆ ನೀವೇ ಅದೃಷ್ಟವಂತರು, ನಿಮ್ಮಲ್ಲಿ ಅವರು ಯಾವುದೇ ಹಣ ಕೇಳುವುದಿಲ್ಲ. ಅವರು ದೈವಿ ಪುರುಷರು ನಿಮಗೆ ಹಾರೈಸಿ ಹೋಗುತ್ತಾರೆ ಎಂದು ಹೇಳಿ ಹೋಗಿದ್ದಾರೆ.
Advertisement
ಮರುದಿನ ಸಾಧು ವೇಷದಲ್ಲಿ ಬಂದ ಅಪರಿಚಿತ ವ್ಯಕ್ತಿ ತಾನು ವೀರಬ್ರಹ್ಮಯ್ಯ ಮಠ ಆಂಧ್ರದಿಂದ ಬಂದಿರುವ ವೆಂಕಟೇಶ್ ಸಾಧು ನಿನ್ನ ಗಂಡನಿಗೆ ದೋಷವಿದೆ ಪೂಜೆ ಮಾಡಿಸಬೇಕು. ಇಲ್ಲದಿದ್ದರೆ 2 ದಿನದಲ್ಲಿ ನಿನ್ನ ಗಂಡ ಸಾಯುತ್ತಾನೆ ಎಂದು ಹೇಳಿದ್ದಾನೆ. ಮಹಿಳೆಗೆ ನಂಬಿಕೆ ಬರಿಸಲು ಒಂದು ಪೇಪರಿನಲ್ಲಿ ಅರಿಶಿನ ಕುಂಕುಮ ಹಾಕಿ ಕೈಯಿಂದ ಒರೆಸಿ ದೆವ್ವದ ಚಿತ್ರ ಮೂಡಿಸಿದ್ದಾನೆ.
Advertisement
ಸಾಧು ವೇಷಧಾರಿಯ ಮಾತು ನಂಬಿ ಪಕ್ಕದ ಮನೆಯ ಸಂಧ್ಯಾ ಎಂಬುವರ ಮನೆಯಿಂದ 40 ಗ್ರಾಂ ಬಂಗಾರದ ಚೈನ್ ತಂದು ಪೂಜೆಗೆ ನೀಡಿದ್ದಾಳೆ. ತಾನೇ ತಂದಿದ್ದ ಸ್ಟೇನ್ಲೆಸ್ ಡಬ್ಬಿಯಲ್ಲಿ ಅಕ್ಕಿ, ಅರಿಶಿನ ಕುಂಕುಮ ಮತ್ತು ಚಿನ್ನದ ಸರ ಹಾಕಿ ಪೂಜೆ ಮಾಡಿದ್ದಾನೆ. ನಾನು ಹೋದ ಮೇಲೆ 5 ನಿಮಿಷ ಬಿಟ್ಟು ಸ್ನಾನ ಮಾಡಿ ದೇವರ ಮುಂದೆ ಡಬ್ಬಿ ತೆಗೆಯಬೇಕು ಎಂದು ತಿಳಿಸಿದ್ದಾನೆ. ಆದರೆ ತನ್ನಲ್ಲಿರುವ ಅಂತಹದೇ ಇನ್ನೊಂದು ಡಬ್ಬಿ ಇಟ್ಟು ಚಿನ್ನವಿದ್ದ ಡಬ್ಬಿಯನ್ನು ತೆಗೆದುಕೊಂಡು ಹೋಗಿದ್ದಾನೆ. ಡಬ್ಬಿ ತೆಗೆದು ನೋಡಿದಾಗಲೇ ಮಹಿಳೆಗೆ ತಾನು ಮೋಸಹೋಗಿರುವುದು ಅರಿವಿಗೆ ಬಂದಿದೆ.
ಘಟನೆ ಹಿನ್ನೆಲೆ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಭೇದಿಸಲು ಆರೋಪಿಯ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಡೋಂಗಿ ಸ್ವಾಮಿಗಳು, ಸಾಧು ವೇಷಧಾರಿಗಳು ಬಂದರೆ ಮೋಸ ಹೋಗದಂತೆ ಸಾರ್ವಜನಿಕರಿಗೆ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.